ಚಾಮರಾಜನಗರ : ಹಾಸಿಗೆಗಳಿಲ್ಲದೇ ಸಾಲು ಸಾಲಾಗಿ ಗರ್ಭಿಣಿಯರು ನೆಲದ ಮೇಲೆ ಮಲಗಿದ್ದ ಘಟನೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ಚಾಮರಾಜನಗರ ವೈದ್ಯಕೀಯ ಕಾಲೇಜಿಗೆ ಭೇಟಿ ನೀಡಿದ ಬಳಿಕ ಜಿಲ್ಲಾಸ್ಪತ್ರೆಗೆ ಬಂದ ಸಚಿವರಿಗೆ ಹೆರಿಗೆ ವಿಭಾಗ ಮುಂಭಾಗದಲ್ಲಿ ಸಾಲುಸಾಲಾಗಿ ಮಲಗಿದ್ದ ಗರ್ಭಿಣಿಯರ ನರಕ ದರ್ಶನವಾಯಿತು. ಬೆಳಗ್ಗೆಯಿಂದಲೂ ಇದೇ ರೀತಿ ಮಲಗಿರುವುದಾಗಿ ಗರ್ಭಿಣಿಯರ ಸಂಬಂಧಿಕರು ಸಚಿವರೆದುರು ಅಳಲು ತೋಡಿಕೊಂಡರು. ಹಾಸಿಗೆಗಳಿಲ್ಲ, ಶೌಚಾಲಯ ಸ್ಥಿತಿ ಅಯೋಮಯ. ಬಡವರು ಬರುವ ಸರ್ಕಾರಿ ಆಸ್ಪತ್ರೆಗೆ ಹೇಳೋರು ಕೇಳೋರು ಯಾರೂ ಇಲ್ಲ ಎಂಬಂತಾಗಿದೆ. ಆಸ್ಪತ್ರೆ ವಾತಾವರಣ ಕಂಡು ವೈದ್ಯರ ವಿರುದ್ಧ ಗರಂ ಆದ ಸಚಿವರು ಉತ್ತಮ ಗಾಳಿ- ಬೆಳಕಿನ ವ್ಯವಸ್ಥೆ ಮಾಡಬೇಕು. ಛಾವಣಿಯನ್ನು ಎತ್ತರಗೊಳಿಸಿ ಫ್ಯಾನ್ ಅಳವಡಿಸಿ, ನೆಲಹಾಸಿಗೆ ಗ್ರಾನೈಟ್ ಹಾಕಿಸಿ ಬರುವವರು ಕುಳಿತುಕೊಳ್ಳಲು ಕುರ್ಚಿಗಳನ್ನು ಇನ್ನು 15 ದಿನಗಳಲ್ಲಿ ಮಾಡಬೇಕೆಂದು ಸೂಚಿಸಿದರು.
ಹೆಣ್ಣು ಮಕ್ಕಳಿಗೆ ಹೆಸರು : ಗರ್ಭಿಣಿಯರ ಸ್ಥಿತಿ ಕಂಡ ಬಳಿಕ ಹೆರಿಗೆ ವಿಭಾಗಕ್ಕೆ ತೆರಳಿದ ಸಚಿವರು, ವಿಶ್ವ ಮಹಿಳಾ ದಿನದಂದು ಹುಟ್ಟಿದ 5 ಹೆಣ್ಣು ಶಿಶುಗಳಿಗೆ ಭೂಮಿ, ಚಂದ್ರ, ದುನಿಯಾ, ಆಯೇಷಾ, ವಿಶ್ವವಾಣಿ ಎಂದು ಸಮಾಜ ಸೇವಕ ಎಲ್. ಸುರೇಶ್ ಜೊತೆಗೂಡಿ ಹೆಸರಿಟ್ಟು ಬಾಣಂತಿಯರಿಗೆ ಹಣ್ಣು, ಶಿಶುಗಳಿಗೆ ಬಟ್ಟೆ ವಿತರಿಸಿದರು.
6 ತಿಂಗಳಿನಲ್ಲಿ ಆಸ್ಪತ್ರೆ ಒಪನ್: ಇದೇ ವೇಳೆ ಆಸ್ಪತ್ರೆ ಭೇಟಿ ಕುರಿತು ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಇನ್ನಾರು ತಿಂಗಳಿನಲ್ಲಿ 450 ಹಾಸಿಗೆಗಳ ಆಸ್ಪತ್ರೆ ಕಾಮಗಾರಿ ಪೂರ್ಣಗೊಳ್ಳಲಿದೆ. ಗುಣಮಟ್ಟ ಪರೀಕ್ಷೆಗಾಗಿ ತಜ್ಞರ ತಂಡ ನೇಮಿಸಲಾಗುವುದು ಎಂದು ತಿಳಿಸಿದರು. ಜಿಲ್ಲಾಸ್ಪತ್ರೆಯಲ್ಲಿ ಕಾಡುತ್ತಿರುವ ವೆಂಟಿಲೇಟರ್ ಸಮಸ್ಯೆಯನ್ನು ಶೀಘ್ರ ಪರಿಹರಿಸಲಾಗುವುದು, ನೂತನ ಆಸ್ಪತ್ರೆ ಬಂದರೆ ಗುಣಮಟ್ಟದ ಚಿಕಿತ್ಸೆ ಬಡವರಿಗೆ ಲಭ್ಯವಾಗಲಿದೆ ಎಂದು ಭರವಸೆ ನೀಡಿದರು.