ಕೊಳ್ಳೆಗಾಲ : ನೂತನ ಹನೂರು ತಾಲೂಕು ಪಂಚಾಯತ್‌ಗೆ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಗದ್ದುಗೆ ಏರಿದೆ.
ಅಜ್ಜಿಪುರ ಕ್ಷೇತ್ರದ ಕಾಂಗ್ರೆಸ್ ಸದಸ್ಯೆ ಸವಿತಾ ಅಧ್ಯಕ್ಷರಾದ್ರೆ, ಉಪಾಧ್ಯಕ್ಷರಾಗಿ ಲೊಕ್ಕನಹಳ್ಳಿ ಕ್ಷೇತ್ರದ ಕೈ ಸದಸ್ಯೆ ರುಕ್ಮಿಣಿ ಚುನಾಯಿತರಾಗಿದ್ದಾರೆ. ಪೊನ್ನಾಚಿ ಕ್ಷೇತ್ರದ ಬಿಜೆಪಿ ಸದಸ್ಯೆ ಶಕುಂತಲ, ಕೌದಳ್ಳಿ ಕ್ಷೇತ್ರದ ಕಾಂಗ್ರೆಸ್ನ ಲತಾ ನಾಮಪತ್ರ ಸಲ್ಲಿಸಿದ್ದರು. ಇವರಲ್ಲಿ ಲತಾ ಅವರ ನಾಮಪತ್ರವು ತಿರಸ್ಕಾರಗೊಂಡಿತು. ಸವಿತಾ ಪರ 10 ಸದಸ್ಯರು ಕೈ ಎತ್ತುವ ಮೂಲಕ ಮತ ನೀಡಿದ್ರೆ, ಶಕುಂತಲ ಪರ 5 ಸದಸ್ಯರು ಮಾತ್ರ ಬೆಂಬಲಿಸಿದರು. ಬಹುಮತ ಪಡೆದ ಸವಿತಾ ಅಧ್ಯಕ್ಷರಾಗಿ ಆಯ್ಕೆಯಾದರು.
ಪಟ್ಟಣದ ತಾಲೂಕು ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಬೆಳ್ಳಗೆ 10.30ಕ್ಕೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಪ್ರಕ್ರಿಯೆ ಉಪವಿಭಾಗಧಿಕಾರಿ ನಿಖಿತಾ ಎಂ ಚಿನ್ನಸ್ವಾಮಿ ಸಮ್ಮುಖದಲ್ಲಿ ನಡೆಯಿತು.
![Congress candidates](https://etvbharatimages.akamaized.net/etvbharat/prod-images/kn-cnr-kollegal-election-av-avb-kac10017_29072020155426_2907f_1596018266_817.jpg)
ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಲೊಕ್ಕನಹಳ್ಳಿ ಕ್ಷೇತ್ರದ ರುಕ್ಮಿಣಿ, ಶ್ಯಾಗ್ಯ ಕ್ಷೇತ್ರದಿಂದ ಸುಮತಿ, ಪೊನ್ನಾಚಿ ಕ್ಷೇತ್ರದಿಂದ ಶಕುಂತಲಾ ಅವರು ನಾಮಪತ್ರ ಸಲ್ಲಿಸಿದ್ದರು. ನಂತರ ಸುಮತಿ ನಾಮಪತ್ರ ವಾಪಸ್ ಪಡೆದಿದ್ದಾರೆ. ಇಬ್ಬರ ನಡುವೆ ಪೈಪೋಟಿ ನಡೆದು ಲೊಕ್ಕನಹಳ್ಳಿ ಕ್ಷೇತ್ರದ ರುಕ್ಮಿಣಿ 10 ಮತಗಳು, ಪೊನ್ನಾಚಿ ಕ್ಷೇತ್ರದ ಶಕುಂತಲ 5 ಮತ ಪಡೆದಿದ್ದರು. ಕಾಂಗ್ರೆಸ್ ಪಕ್ಷದ ರುಕ್ಮಿಣಿ 5 ಮತಗಳ ಹೆಚ್ಚಳದಿಂದ ಬಹುಮತ ಸಾಬೀತು ಪಡಿಸಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ನಂತರ ಹನೂರು ಶಾಸಕ ಆರ್ ನರೇಂದ್ರ ಸ್ಥಳಕ್ಕೆ ಭೇಟಿ ನೀಡಿ ಗೆದ್ದ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.