ಚಾಮರಾಜನಗರ: ಮಲೆಮಹದೇಶ್ವರ ಬೆಟ್ಟದಲ್ಲಿ ನಿಯಮಬದ್ಧವಾಗಿ ನೆರವೇರುವ ಸಾಮೂಹಿಕ ವಿವಾಹಕ್ಕೆ ಅಂಟಿದ್ದ ವಿಘ್ನ ದೂರವಾಗಿದೆ. ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಆಗಸ್ಟ್ 23 ಹಾಗೂ 28ರಂದು ನೆರವೇರಬೇಕಿದ್ದ ಸಾಮೂಹಿಕ ವಿವಾಹವನ್ನು ಕೆಲ ಕಾರಣಾಂತರಗಳಿಂದ ಮುಂದೂಡಲಾಗಿತ್ತು. ಇದರಿಂದ ಬೇಸತ್ತ ಏಳು ಜೋಡಿ ಸಾಲೂರು ಮಠದಲ್ಲಿ ಸೋಮವಾರ (ಆ.28) ಸರಳ ವಿವಾಹ ಮಾಡಿಕೊಂಡಿದ್ದರು.
ಈ ಕುರಿತು ಮಂಗಳವಾರ 'ಈಟಿವಿ ಭಾರತ' 'ಮಾದಪ್ಪನ ಬೆಟ್ಟದಲ್ಲಿ ಸಾಮೂಹಿಕ ವಿವಾಹಕ್ಕೆ ಕೂಡಿ ಬರದ ಮುಹೂರ್ತ: ಬೇಸತ್ತು ಹಸೆಮಣೆ ಏರಿದ 7 ಜೋಡಿ' ಎಂಬ ಶೀರ್ಷಿಕೆಯಡಿ ವರದಿ ಬಿತ್ತರಿಸಿತ್ತು. ಇದರಿಂದ ಎಚ್ಚೆತ್ತ ಮಲೆಮಹದೇಶ್ವರ ಬೆಟ್ಟ ಪ್ರಾಧಿಕಾರ ಸೆ. 25 ರಂದು ಸಾಮೂಹಿಕ ವಿವಾಹ ನೆರವೇರಿಸುವುದಾಗಿ ಹೇಳಿದೆ.
'ಈಗಾಗಲೇ 65 ಜೋಡಿಗಳು ವಿವಾಹಕ್ಕೆ ನೋಂದಣಿ ಮಾಡಿಕೊಂಡಿದ್ದು ಇನ್ನು 35 ಜೋಡಿಗಳು ಹೆಸರು ನೋಂದಾಯಿಸಲು ಅವಕಾಶವಿದೆ. ಸಾಮೂಹಿಕ ವಿವಾಹವಾಗುವ ವಧುವಿಗೆ ಉಚಿತವಾಗಿ ನೀಡುತ್ತಿದ್ದ 2 ಗ್ರಾಂ ಚಿನ್ನದ ತಾಳಿಯನ್ನು 4 ಗ್ರಾಂಗೆ ಹೆಚ್ಚಿಸಲಾಗಿದೆ. ಸೆ. 25ರಂದು ನಡೆಯುವ ಸಾಮೂಹಿಕ ವಿವಾಹಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಸಹ ಪಾಲ್ಗೊಳ್ಳಲಿದ್ದಾರೆ' ಎಂದು ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಸೆಮಣೆ ಏರಿದ್ದ 7 ಜೋಡಿ: ಮಲೆಮಹದೇಶ್ವರ ಬೆಟ್ಟದಲ್ಲಿ ನಿಗದಿಯಾಗಿದ್ದ ಸಾಮೂಹಿಕ ವಿವಾಹ ಎರಡು ಬಾರಿ ಮುಂದೂಡಿದ ಕಾರಣ ಕ್ಷೇತ್ರದಲ್ಲಿರುವ ಸಾಲೂರು ಮಠದಲ್ಲಿ ಸೋಮವಾರ 7 ಜೋಡಿಗಳು ಹಸೆಮಣೆ ಏರಿ ನೂತನ ಜೀವನಕ್ಕೆ ಕಾಲಿಟ್ಟಿದ್ದರು. ಆ. 23 ರಂದು ಸಾಮೂಹಿಕ ವಿವಾಹಕ್ಕೆ ದಿನಾಂಕ ನಿಗದಿಯಾಗಿತ್ತು. ಆದರೆ, ಈ ದಿನಾಂಕ ಮುಂದೂಡಿಕೆಯಾಗಿ ಬಳಿಕ ಆ. 28ರಂದು ನಿಗದಿಯಾಗಿತ್ತು. ಆದರೆ, ನಂತರ ಆ.28ರಂದು ನಿಗದಿಯಾಗಿದ್ದ ಸಾಮೂಹಿಕ ವಿವಾಹ ದಿನಾಂಕ ಮತ್ತೆ ಮುಂದೂಡಿಕೆಯಾಗಿತ್ತು. ಇದು ಭಕ್ತರ ಬೇಸರಕ್ಕೆ ಕಾರಣವಾಗಿತ್ತು.
ಮಲೆಮಾದಪ್ಪನ ಸನ್ನಿಧಿಯಲ್ಲಿ ವಿವಾಹವಾದರೆ ಶುಭವಾಗುತ್ತೆ ಎಂಬ ನಂಬಿಕೆಯಿದೆ. ಈ ಹಿನ್ನೆಲೆ ವಿವಾಹ ನಿಶ್ಚಯವಾಗಿದ್ದ ಬಹುತೇಕ ಬಡ ವರ್ಗದ ವಧು-ವರರು ಮಲೆಮಹದೇಶ್ವರ ಬೆಟ್ಟದಲ್ಲಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಡೆಯುವ ಉಚಿತ ಸಾಮೂಹಿಕ ವಿವಾಹದಲ್ಲಿ ಮದುವೆಯಾಗಲು ಅರ್ಜಿ ಸಲ್ಲಿಸಿದ್ದರು. ಆದರೆ, 2 ಬಾರಿ ವಿವಾಹ ಮುಂದೂಡಿಕೆಯಾಗಿತ್ತು. ಈ ಹಿನ್ನೆಲೆ ಚಾಮರಾಜನಗರದ ಜಗದೀಶ್ - ನಂಜನಗೂಡಿನ ಕಾವ್ಯಶ್ರೀ, ಪಿ.ಜಿ ಪಾಳ್ಯದ ಮಹೇಶ್‌ಕುಮಾರ್ – ಮೈಸೂರಿನ ಹೊರಳವಾಡಿಯ ರಮ್ಯ, ತಾಳವಾಡಿಯ ಉದಯ ಕುಮಾರ್ –ಇದೇ ಗ್ರಾಮದ ಸ್ನೇಹ, ನರಸೀಪುರದ ದಿನೇಶ್ – ಮೈಸೂರಿನ ನಿರ್ಮಲ, ನಂಜನಗೂಡು ಹಳೇಪುರದ ಮಹೇಂದ್ರ – ಚಾಮರಾಜನಗರದ ಅರಳೀಪುರ ಗ್ರಾಮದ ಮಂಗಳಮ್ಮ, ಮೈಸೂರಿನ ಸಂಜಯ್- ಸೌಭಾಗ್ಯ ಹಾಗೂ ಚಾಮರಾಜನಗರದ ರವಿ - ಸೌಮ್ಯ ಜೋಡಿ ಸಾಲೂರು ಬೃಹನ್ಮಠದಲ್ಲಿ ಸಪ್ತಪದಿ ತುಳಿದಿದ್ದರು.
ಇದನ್ನೂ ಓದಿ: ಮಾದಪ್ಪನ ಬೆಟ್ಟದಲ್ಲಿ ಸಾಮೂಹಿಕ ವಿವಾಹಕ್ಕೆ ಕೂಡಿ ಬರದ ಮುಹೂರ್ತ: ಬೇಸತ್ತು ಹಸೆಮಣೆ ಏರಿದ 7 ಜೋಡಿ