ಚಾಮರಾಜನಗರ: ಅಪ್ರಾಪ್ತೆಯರನ್ನು ಪ್ರೀತಿಸಿ ಮದುವೆಯಾಗಿದ್ದ ಇಬ್ಬರಿಗೆ ತಲಾ 10 ವರ್ಷ ಜೈಲು ಶಿಕ್ಷೆ ವಿಧಿಸಿ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ. ಜೊತೆಗೆ, ಆರೋಪಿಗಳು 5.20 ಲಕ್ಷ ರೂ. ದಂಡ ತೆರಬೇಕು. ತಪ್ಪಿದ್ದಲ್ಲಿ, 2 ವರ್ಷ ಸಾಧಾರಣ ಶಿಕ್ಷೆ ಎಂದು ಜಿಲ್ಲಾ ನ್ಯಾ. ಸದಾಶಿವ ಎಸ್.ಸುಲ್ತಾನ್ ಪುರಿ ಸೂಚಿಸಿದ್ದಾರೆ.
ಹನೂರು ತಾಲೂಕಿನ ಪಿ.ಬಿ.ದೊಡ್ಡಿ ಗ್ರಾಮದ ಚೆಲುವ ಹಾಗೂ ಮುತ್ತುರಾಜ್ ಶಿಕ್ಷೆಗೊಳಗಾದ ಅಪರಾಧಿಗಳು. ಅದೇ ಗ್ರಾಮದಲ್ಲಿ ವಾಸವಿದ್ದ ಇಬ್ಬರು ಬಾಲಕಿಯರನ್ನು 2016 ರಲ್ಲಿ ಇವರಿಬ್ಬರು ಪ್ರೀತಿಸಿ, ಮನೆಯಿಂದ ತಮಿಳುನಾಡಿಗೆ ಕರೆದೊಯ್ದು ಮದುವೆಯಾಗಿ ಕೂಲಿ ಕೆಲಸ ಮಾಡುತ್ತಿದ್ದರು. ಬಳಿಕ, ಪೊಲೀಸರು ಬಾಲಕಿಯರನ್ನು ಪತ್ತೆಹಚ್ಚಿ ಕರೆತಂದಿದ್ದರು.
ಈ ಸಂಬಂಧ ರಾಮಾಪುರ ಠಾಣೆಯಲ್ಲಿ ಪೊಕ್ಸೊ ಕಾಯ್ದೆಯಡಿ ಅಡಿ ಪ್ರಕರಣ ದಾಖಲಾಗಿತ್ತು. ಅಪ್ರಾಪ್ತೆಯರನ್ನು ಮದುವೆಯಾಗಿ ಲೈಂಗಿಕ ಕ್ರಿಯೆ ನಡೆಸಿದ್ದು ಸಾಬೀತಾದ ಹಿನ್ನೆಲೆಯಲ್ಲಿ ಇಂದು ನ್ಯಾಯಾಧೀಶರು ಶಿಕ್ಷೆ ಪ್ರಕಟಿಸಿ ಆದೇಶಿಸಿದ್ದಾರೆ.
ತಲಾ 5.20 ಲಕ್ಷ ರೂ. ದಂಡದ ಹಣವನ್ನು ಬಾಲಕಿಯರಿಗೆ ಪರಿಹಾರ ರೂಪದಲ್ಲಿ ನೀಡಬೇಕೆಂದು ಆದೇಶಿಸಿದ್ದು, ವಿಶೇಷ ಸರ್ಕಾರಿ ಅಭಿಯೋಜಕರಾಗಿ ಯೋಗೇಶ್ ವಾದ ಮಂಡಿಸಿದ್ದರು.