ಚಾಮರಾಜನಗರ: ಮನೆ ಸುತ್ತಲೂ 8 ಅಡಿ ಕಾಂಪೌಂಡ್ ಕಟ್ಟಿ ಗಾಂಜಾ ಬೆಳೆದಿದ್ದನ್ನು ಪೊಲೀಸರು ಪತ್ತೆ ಹಚ್ಚಿರುವ ಘಟನೆ ಹನೂರು ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.
ಹೊಸಹಳ್ಳಿ ಗ್ರಾಮದ ಜಮೀನಿನಲ್ಲಿ ನೂತನವಾಗಿ ನಿರ್ಮಿಸಿದ್ದ ಮನೆ ಬಳಿ ಯಾವುದೇ ಪ್ರವೇಶದ್ವಾರ ಇಲ್ಲದಂತೆ ಕಾಂಪೌಂಡ್ ನಿರ್ಮಿಸಿ ಅದರೊಳಗೆ ಮಾವ, ಅಳಿಯ ಹಾಗೂ ಮತ್ತೋರ್ವ ಸಂಬಂಧಿ ಗಾಂಜಾ ಬೆಳೆದಿದ್ದರು. ಹೀಗೆ ಖತರ್ನಾಕ್ ವಿಧಾನ ಬಳಸಿ ಬರೋಬ್ಬರಿ 228 ಗಾಂಜಾ ಗಿಡಗಳನ್ನು ಬೆಳೆದಿದ್ದ ಇವರಿಂದ 154 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ.
ಗಾಂಜಾ ಬೆಳೆದ ಖಚಿತ ಮಾಹಿತಿ ಮೇರೆಗೆ ರಾಮಾಪುರ ಠಾಣೆ ಪಿಐ ಮನೋಜ್ ಕುಮಾರ್ ನೇತೃತ್ವದ ತಂಡ ದಾಳಿ ನಡೆಸಿ ಮಾದಕವಸ್ತು ವಶಪಡಿಸಿಕೊಂಡಿದ್ದಾರೆ. ಸದ್ಯ, ಮೂವರು ಆರೋಪಿಗಳಾದ ಅಳಿಯ ಗೋವಿಂದರಾಜು, ಮಾವ ಚಿನ್ನವೆಂಕಟಾಬೋವಿ ಹಾಗೂ ಬಾಮೈದುನ ಕುಮಾರ್ ತಲೆಮರೆಸಿಕೊಂಡಿದ್ದಾರೆ.
ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮನೋಜ್ ಕುಮಾರ್ ತಂಡದ ಈ ಯಶಸ್ವಿ ಕಾರ್ಯಾಚರಣೆಗೆ ಪೊಲೀಸ್ ವರಿಷ್ಠಾಧಿಕಾರಿ ಬಹುಮಾನ ಘೋಷಿಸಿದ್ದಾರೆ.