ಚಾಮರಾಜನಗರ: ಡಿಸ್ಕವರಿ ಚಾನೆಲ್ನ ಜನಪ್ರಿಯ ಟಿವಿ ಶೋ ಮ್ಯಾನ್ ವರ್ಸಸ್ ವೈಲ್ಡ್ ವಿಶೇಷ ಸಂಚಿಕೆಗಾಗಿ ಸೂಪರ್ ಸ್ಟಾರ್ ರಜಿನಿಕಾಂತ್ ಹಾಗೂ ಬಾಲಿವುಡ್ ಆ್ಯಕ್ಷನ್ ಸ್ಟಾರ್ ಅಕ್ಷಯ್ ಕುಮಾರ್ ಹಾಗೂ ಸಾಹಸಿಗ ಬೇರ್ ಗ್ರಿಲ್ಸ್ ಜೊತೆಯಾಗಿ ಕಾಡು ಸುತ್ತಲಿದ್ದು, ಈಗಾಗಲೇ ತಲೈವಾ ತಮ್ಮ ಭಾಗದ ಚಿತ್ರೀಕರಣ ಮುಗಿಸಿದ್ದಾರೆ.
ಬಂಡೀಪುರದಲ್ಲಿ ಮ್ಯಾನ್ ವರ್ಸಸ್ ವೈಲ್ಡ್ ಚಿತ್ರೀಕರಣ ಕಳೆದ ವರ್ಷ ಜಿಮ್ ಕಾರ್ಬೆಟ್ ಅಭಯಾರಣ್ಯದಲ್ಲಿ ಗ್ರಿಲ್ಸ್ ಜೊತೆ ಪ್ರಧಾನಿ ನರೇಂದ್ರ ಮೋದಿ ಕಾಡು ಸುತ್ತಾಡಿ ಪರಿಸರ, ವನ್ಯಜೀವಿಗಳ ಬಗ್ಗೆ ಸಂವಾದ ನಡೆಸಿದ್ದರು. ಈ ಶೋ ಯಶಸ್ಸಿನ ನಂತರ ರಜಿನಿ ಮತ್ತು ಅಕ್ಷಯ್ ಕುಮಾರ್ ಅವರೊಂದಿಗೆ ವಿಶೇಷ ಸಂಚಿಕೆ ತಯಾರಾಗುತ್ತಿದೆ. ಇಂಟ್ರೆಸ್ಟಿಂಗ್ ವಿಷಯವೇನೆಂದರೆ ಜಿಮ್ ಕಾರ್ಬೆಟ್ ಬಳಿಕ ಎರಡನೇಯ ಜನಪ್ರಿಯ ಅಭಯಾರಣ್ಯ ಹುಡುಕಾಟದಲ್ಲಿ ಮಧ್ಯ ಪ್ರದೇಶದ ಕಾನಾ ಹಾಗೂ ಕರ್ನಾಟಕದ ಬಂಡೀಪುರವನ್ನು ಆಯ್ಕೆ ಮಾಡುವಾಗ ರಜಿನಿ ಬಂಡೀಪುರ ಸೂಚಿಸಿ, ಅದನ್ನೇ ಆಯ್ಕೆ ಮಾಡಿಕೊಳ್ಳುವಂತೆ ಹೇಳಿದ್ದಾರೆ ಎಂದು ಅರಣ್ಯ ಇಲಾಖೆಯ ಖಚಿತ ಮೂಲಗಳು ಈಟಿವಿ ಭಾರತಕ್ಕೆ ಮಾಹಿತಿ ನೀಡಿವೆ.ಈ ಹಿಂದೆ ಬಂಡೀಪುರದಲ್ಲಿ ರಜಿನಿಯ ಕೆಲ ಚಿತ್ರಗಳು ಚಿತ್ರೀಕರಣಗೊಂಡಿದ್ದು ಮತ್ತು ಸಾಕಷ್ಟು ಸಲ ಭೇಟಿ ನೀಡಿದ್ದರಿಂದ ಬಂಡೀಪುರವನ್ನು ರಜಿನಿ ಆಯ್ಕೆ ಮಾಡಿದ್ದಾರೆ ಎನ್ನಲಾಗಿದೆ. ಇನ್ನು, ಮೂಳೆಹೊಲೆ ಅರಣ್ಯ ವಲಯದಲ್ಲಿ 6 ಗಂಟೆಗಳ ಕಾಲ ರಜಿನಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಗುಡ್ಡದಿಂದ ಹತ್ತಿ ಜಾರುವ ದೃಶ್ಯವೊಂದಿದ್ದು, ಆ ವೇಳೆ ನೆಲಕ್ಕೆ ಕೈ ಊರಿದಾಗ ಲಂಟಾನ ಮುಳ್ಳು ತರಚಿದೆಯಷ್ಟೇ ಎನ್ನಲಾಗಿದೆ. ಚಿತ್ರೀಕರಣದ ವೇಳೆ ಬಂಡೀಪುರ ಕಾಡನ್ನು ಕಂಡು ಫಿದಾ ಆಗಿರುವ ತಲೈವಾ, ಈ ರೀತಿಯ ಕಾಡನ್ನು ರಕ್ಷಿಸುವ ಹೊಣೆ ಎಲ್ಲರ ಮೇಲಿದೆ. ಈ ಕುರಿತು ನಾನೊಂದು ಸಂದೇಶವನ್ನು ನೀಡುತ್ತೇನೆಂದು ಹೇಳಿದ್ದಾರೆಂದು ಬಂಡೀಪುರ ಸಿಎಫ್ಒ ಬಾಲಚಂದ್ರ ತಿಳಿಸಿದ್ದಾರೆ. ಇನ್ನು, ಈ ಬಾರಿಯ ಮ್ಯಾನ್ ವರ್ಸಸ್ ವೈಲ್ಡ್ ಸಂಚಿಕೆಯಲ್ಲಿ ಕಾಡು, ಅರಣ್ಯದ ರಮ್ಯತೆಯ ಬಗ್ಗೆ ತೋರಿಸುವ ಜೊತೆಗೆ ಕಾಡನ್ನು ಬೆಂಕಿಯಿಂದ, ಕಳ್ಳರಿಂದ ರಕ್ಷಿಸುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ ಶ್ರಮದ ಮೇಲೂ ಬೆಳಕು ಚೆಲ್ಲಲಾಗುತ್ತೆ ಎಂದು ಮೂಲಗಳು ತಿಳಿಸಿವೆ. ಡ್ರೋಣ್ ಕ್ಯಾಮರಾದ ಮೂಲಕ ಕಾಡಾನೆಗಳು, ಹುಲಿಗಳ ಚಿನ್ನಾಟ, ಚಿರತೆಯ ದೃಶ್ಯಗಳನ್ನು ಸೆರೆ ಹಿಡಿದಿದ್ದು, ಬೆಂಕಿ ರೇಖೆ ನಿರ್ಮಾಣ ಮಾಡಿರುವುದನ್ನು ಚಿತ್ರೀಕರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಗುರುವಾರ ಅಕ್ಷಯ್ ಕುಮಾರ್ ಕೂಡ ಗ್ರಿಲ್ಸ್ ಜೊತೆ ಕಾಡು ಸುತ್ತಲಿದ್ದಾರೆ ಎಂದು ತಿಳಿದು ಬಂದಿದೆ. ಮ್ಯಾನ್ ವರ್ಸಸ್ ವೈಲ್ಡ್ ಮೂಲಕ ಬಂಡೀಪುರ ಮತ್ತಷ್ಟು ಪ್ರಸಿದ್ಧಿ ಹೊಂದಿ ದೇಶ-ವಿದೇಶದ ಗಮನ ಸೆಳೆಯಲಿದೆ ಎಂದೇ ಹೇಳಲಾಗುತ್ತಿದೆ.