ಚಾಮರಾಜನಗರ: ಕಳ್ಳಭಟ್ಟಿ ಕುಡಿದರೆ ಕೊರೊನಾ ಬರಲ್ಲವೆಂದು ಕಳ್ಳಭಟ್ಟಿ ತಯಾರಿಸುತ್ತಿದ್ದವನನ್ನು ಅಬಕಾರಿ ಪೊಲೀಸರು ಬಂಧಿಸಿರುವ ಘಟನೆ ಹನೂರು ತಾಲೂಕಿನ ದೊರೆದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಬಂಧಿತ ಭೀಮನಾಯ್ಕ ಕಳ್ಳಭಟ್ಟಿ ಕುಡಿದರೆ ಕೊರೊನಾ ಬರಲ್ಲವೆಂದು ಬೆಲ್ಲದ ಕೊಳೆ, ಮರದ ಚಕ್ಕೆಯನ್ನು ಜಮೀನನಲ್ಲಿ ಶೇಖರಿಸಿದ್ದಾನೆ. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ಕೊಳ್ಳೇಗಾಲ ಅಬಕಾರಿ ಸಿಪಿಐ ಮೀನಾ ನೇತೃತ್ವದ ತಂಡ ದಾಳಿ ನಡೆಸಿ ಮಾಲು ವಶಕ್ಕೆ ಪಡೆದಿದೆ.
ಕಳೆದ ಮೂರೂವರೆ ವರ್ಷಗಳಿಂದ ಜಿಲ್ಲೆಯಲ್ಲಿ ಕಳ್ಳಭಟ್ಟಿ ಪ್ರಕರಣಗಳು ನಡೆದಿರಲಿಲ್ಲ. ಲಾಕ್ಡೌನ್ನಿಂದ ಮದ್ಯಕ್ಕೆ ಎಣ್ಣೆಪ್ರಿಯರು ಪರದಾಡುತ್ತಿರುವುದರಿಂದ ಕೊರೊನಾ ನೆಪವೊಡ್ಡಿ ಕಳ್ಳಭಟ್ಟಿ ತಯಾರಿಕೆಗೆ ಆರೋಪಿ ಮುಂದಾಗಿದ್ದ ಎಂದು ತಿಳಿದುಬಂದಿದೆ.
ಕಾರ್ಯಾಚರಣೆಯಲ್ಲಿ 90 ಲೀ. ಬೆಲ್ಲದ ಕೊಳೆ, 6-7 ಚೀಲ ಮರದ ಚಕ್ಕೆಯನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.