ಚಾಮರಾಜನಗರ: ಒಣಗಿಸಿದ್ದ ಜಿಂಕೆ ಮಾಂಸ ಸಾಗಿಸುತ್ತಿದ್ದ ವ್ಯಕ್ತಿಯೋರ್ವನನ್ನು ಹನೂರು ತಾಲೂಕಿನ ಕಾವೇರಿ ವನ್ಯಜೀವಿ ಧಾಮ ವ್ಯಾಪ್ತಿಯ ಹಲಗಾಪುರ ಗಸ್ತಿನಲ್ಲಿ ಬಂಧಿಸಲಾಗಿದೆ.
ಹನೂರು ತಾಲೂಕಿನ ಕಳ್ಳಿದೊಡ್ಡಿ ಗ್ರಾಮದ ರಾಮಾಚಾರಿ (64) ಬಂಧಿತ ಆರೋಪಿ. ಗಾಣಿಗಮಂಗಲ ಗ್ರಾಮದ ಮಾದೇಗೌಡ ಎಂಬವರ ಮಗನಾದ ಸಣ್ಣಪ್ಪ ಪರಾರಿಯಾಗಿದ್ದಾನೆ. ಸಣ್ಣಪ್ಪ ಶನಿವಾರ ಗಾಣಿಗಮಂಗಲದ ಸಮೀಪದ ಕಾವೇರಿ ವನ್ಯಜೀವಿ ವಿಭಾಗಕ್ಕೆ ಸೇರಿದ ಅರಣ್ಯ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿ ಜಿಂಕೆಯನ್ನು ಭೇಟೆಯಾಡಿ ಅದರ ಮಾಂಸವನ್ನು ಒಣಗಿಸಿ ರಾಮಾಚಾರಿ ಎಂಬಾತನಿಗೆ ನೀಡಿದ್ದನು.
ಟಿವಿಎಸ್ ಬೈಕ್‍ನಲ್ಲಿ ಮಾಂಸ ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ದಾಳಿ ನಡೆಸಿ ಬಂಧಿಸಿದ್ದಾರೆ. ಆತನಿಂದ ಜಿಂಕೆ ಮಾಂಸ ಹಾಗೂ ಘಟನೆಗೆ ಬಳಸಿದ್ದ ಬೈಕ್ ವಶಪಡಿಸಿಕೊಂಡಿದ್ದು, ತಲೆ ಮರೆಸಿಕೊಂಡಿರುವ ಪ್ರಮುಖ ಆರೋಪಿ ಪತ್ತೆಗೆ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.