ಚಾಮರಾಜನಗರ : ಪವಾಡ ಪುರುಷ ಮಾದಪ್ಪನ ಶಿವರಾತ್ರಿ ಮಹಾ ರಥೋತ್ಸವ ಮಲೆ ಮಹದೇಶ್ವರ ಬೆಟ್ಟದಲ್ಲಿ ಇಂದು ಸಾವಿರಾರು ಭಕ್ತರ ಸಮ್ಮುಖದಲ್ಲಿ ಉಘೇ ಉಘೇ ಮಾದಪ್ಪ ಎಂಬ ಝೇಂಕಾರಗಳೊಂದಿಗೆ ಸರಳ, ಸಾಂಪ್ರದಾಯಿಕವಾಗಿ ಜರುಗಿತು.
ಬೆಳಗ್ಗೆ 10.25ರ ಶುಭ ವೃಷಭ ಲಗ್ನದಲ್ಲಿ ಮಹಾ ರಥೋತ್ಸವಕ್ಕೆ ಚಾಲನೆ ದೊರೆಯಿತು. ಮಹಾ ರಥೋತ್ಸವದಲ್ಲಿ ಸ್ಥಳೀಯ ಮಹದೇಶ್ವರಬೆಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧ ಗ್ರಾಮಗಳಿಂದ ಬಂದಿದ್ದ ಸಾವಿರಾರು ಸಂಖ್ಯೆಯ ಭಕ್ತಗಣ ಮಾದಪ್ಪನ ಘೋಷಣೆಗಳನ್ನು ಮೊಳಗಿಸಿ ಮಾಯಕಾರನ ಭಕ್ತಿರಸದಲ್ಲಿ ಮಿಂದೆದ್ದರು.
ರಥದ ಜೊತೆಯಲ್ಲಿ ಹಸಿರು ಸೀರೆಯನ್ನುಟ್ಟು ಬೆಲ್ಲದಾರತಿ ಬೆಳಗಿದ ಬೇಡಗಂಪಣ್ಣ ಸಮುದಾಯದ 101 ಹೆಣ್ಣುಮಕ್ಕಳ ಮೆರವಣಿಗೆ, ಹುಲಿ ವಾಹನ, ಬಸವ ವಾಹನ ಹಾಗೂ ರುದ್ರಾಕ್ಷಿ ವಾಹನಗಳು,ಜಾನಪದ ಕಲಾತಂಡಗಳು ಪಾಲ್ಗೊಂಡಿದ್ದವು. ಕಳೆದ 4 ದಿನಗಳಿಂದ ನಡೆದ ಶಿವರಾತ್ರಿ ಸಂಭ್ರಮಕ್ಕೆ ಇಂದು ತೆರೆಬಿದ್ದಿದೆ.
ಈ ಬಾರಿ ಕೊರೊನಾ ಕಾರಣದಿಂದ ಸರಳ ಹಾಗೂ ಸಂಪ್ರದಾಯಕವಾಗಿ ನಡೆದ ಶಿವರಾತ್ರಿ ಜಾತ್ರಾ ಮಹೋತ್ಸವದಲ್ಲಿ 4ರಿಂದ 5ಸಾವಿರ ಸ್ಥಳೀಯ ಜನರಷ್ಟೇ ಪಾಲ್ಗೊಂಡಿದ್ದರು. ಪ್ರತಿ ವರ್ಷ ಚಾಮರಾಜನಗರ ಸೇರಿದಂತೆ ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ಹಾಗೂ ನೆರೆಯ ತಮಿಳುನಾಡು ರಾಜ್ಯದಿಂದ 5-6 ಲಕ್ಷ ಮಂದಿ ಭಕ್ತರು ಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ಆಗಮಿಸಿ ಪಾಲ್ಗೊಳ್ಳುತ್ತಿದ್ದರು.