ಚಾಮರಾಜನಗರ: ಜಿಲ್ಲೆಯ ಭೋಗಪುರ ಸಮೀಪದ ಜಮೀನೊಂದರಲ್ಲಿ ಭಾರತೀಯ ವಾಯುಸೇನೆಗೆ ಸೇರಿದ ಲಘು ವಿಮಾನ ಪತನವಾಗಿರುವ ಘಟನೆ ಇಂದು ನಡೆದಿದೆ. ಇಬ್ಬರು ಪೈಲೆಟ್ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಾರಾಟದ ವೇಳೆ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಕೂಡಲೇ ಎಚ್ಚೆತ್ತ ಪೈಲೆಟ್ಗಳು ಪ್ಯಾರಾಚೂಟ್ ಮೂಲಕ ವಿಮಾನದಿಂದ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧಿಕಾರಿಗಳು ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ವಾಯುಸೇನೆಯ ಕಿರಣ್ ಏರ್ ಪಥ್ ಹೆಸರಿನ U692 ಸಂಖ್ಯೆಯ ತರಬೇತಿ ವಿಮಾನ ಧರೆಗಪ್ಪಳಿಸಿದೆ. ಪೈಲೆಟ್ಗಳಾದ ಭೂಮಿಕಾ ಹಾಗೂ ತೇಜ್ ಪಾಲ್ ಎಂಬವರು ವಿಮಾನ ಚಲಾಯಿಸುತ್ತಿದ್ದರು. ನಿಯಂತ್ರಣ ಕಳೆದುಕೊಳ್ಳತ್ತಿದ್ದಂತೆ ಪ್ಯಾರಾಚೂಟ್ ಮೂಲಕ ಇಬ್ಬರೂ ಹಾರಿ ವಿಮಾನ ಪತನಗೊಂಡ 2 ಕಿ.ಮೀ ದೂರದಲ್ಲಿ ಬಿದ್ದಿದ್ದಾರೆ. ವಾಯುಸೇನೆ ಪಡೆ ಇಬ್ಬರನ್ನು ಪತ್ತೆ ಹಚ್ಚಿ ರಕ್ಷಣೆ ಮಾಡಿದೆ. ಇಬ್ಬರಿಗೂ ಕುತ್ತಿಗೆಯ ಬಳಿ ಸಣ್ಣಪುಟ್ಟ ಗಾಯವಾಗಿದ್ದು ಬೆಂಗಳೂರಿಗೆ ವಿಶೇಷ ಹೆಲಿಕಾಪ್ಟರ್‌ನಲ್ಲಿ ಚಿಕಿತ್ಸೆಗೆ ಕರೆದೊಯ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಿಂಗಳಲ್ಲಿ ಎರಡನೇ ಘಟನೆ: ಇದು ತಿಂಗಳಲ್ಲಿ ನಡೆದ ಎರಡನೇ ಘಟನೆದೆ. ಇದಕ್ಕೂ ಮುನ್ನ ರಾಜಸ್ಥಾನದಲ್ಲಿ ವಿಮಾನ ಪತನಗೊಂಡಿತ್ತು. ಮೇ.8 ರಂದು ಭಾರತೀಯ ವಾಯುಪಡೆಯ MiG-21 ಯುದ್ಧ ವಿಮಾನ ರಾಜಸ್ಥಾನದ ಹನುಮಾನ್‌ಗಢ್ ಬಳಿ ಬಿದ್ದಿತ್ತು. ಸೂರತ್‌ಗಢದಿಂದ ವಿಮಾನ ಹೊರಟಿದ್ದು ತಾಂತ್ರಿಕ ದೋಷದಿಂದಾಗಿ ನೆಲಕ್ಕಪ್ಪಳಿಸಿದೆ. ವಿಮಾನ ಬಿದ್ದ ರಭಸಕ್ಕೆ ಇಬ್ಬರು ಮಹಿಳೆಯರು ಸೇರಿ ಮೂವರು ಸಾವಿಗೀಡಾಗಿದ್ದರು. ವಿಮಾನದಲ್ಲಿದ್ದ ಪೈಲೆಟ್ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕಳೆದ ಜನವರಿಯಲ್ಲಿ ರಾಜಸ್ಥಾನದ ಭರತ್‌ಪುರದಲ್ಲಿ ತರಬೇತಿ ವೇಳೆ ಎರಡು IAF ಫೈಟರ್ ಜೆಟ್‌ಗಳಾದ ಸುಖೋಯ್ ಎಸ್‌ಯು - 30 ಮತ್ತು ಮಿರಾಜ್ - 2000 ಪತನಗೊಂಡಿದ್ದವು. ಘಟನೆಯಲ್ಲಿ ಒಬ್ಬ ಪೈಲೆಟ್ ಪ್ರಾಣ ಕಳೆದುಕೊಂಡಿದ್ದರು. ಒಂದು ವಿಮಾನ ಮಧ್ಯಪ್ರದೇಶದ ಮೊರೆನಾದಲ್ಲಿ ಪತನವಾದರೆ, ಇನ್ನೊಂದು ವಿಮಾನ ರಾಜಸ್ಥಾನದ ಭರತ್‌ಪುರದಲ್ಲಿ ನೆಲಕ್ಕಪ್ಪಳಿಸಿತ್ತು.
ಇದನ್ನೂ ಓದಿ: ರಾಜಸ್ಥಾನದಲ್ಲಿ MiG-21 ಯುದ್ಧ ವಿಮಾನ ಪತನ: ಇಬ್ಬರು ಮಹಿಳೆಯರು ಸೇರಿ ಮೂವರು ಸಾವು
ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಸಹ ಕೆಲವು ದಿನಗಳ ಹಿಂದೆ ಭಾರತೀಯ ಸೇನಾ ಹೆಲಿಕಾಪ್ಟರ್ ಪತನವಾಗಿತ್ತು. ಹಾಗೆಯೇ, ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪ್ರಯೋಗದ ವೇಳೆ ಕ್ರ್ಯಾಶ್ ಲ್ಯಾಂಡಿಂಗ್ ಮಾಡಿದಾಗ ಏಪ್ರಿಲ್ ತಿಂಗಳಿನಲ್ಲಿ ಕೊಚ್ಚಿಯಲ್ಲಿ ಮತ್ತೊಂದು ಅಪಘಾತ ಸಂಭವಿಸಿತ್ತು. ತರಬೇತಿ ಹಾರಾಟದ ವೇಳೆ ಈ ಅವಘಡ ಸಂಭವಿಸಿತ್ತು. ಹೆಲಿಕಾಪ್ಟರ್‌ನಲ್ಲಿ ಮೂವರು ಸಿಬ್ಬಂದಿಗಳಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದರು. ತಾಂತ್ರಿಕ ಸಮಸ್ಯೆ ಕಾರಣದಿಂದ ಹೆಲಿಕಾಪ್ಟರ್ ಪತನಗೊಂಡಿತ್ತು. ಕೋಸ್ಟ್ ಗಾರ್ಡ್ ತರಬೇತಿ ವೇಳೆ ಟೇಕಾಫ್ ಆಗುವ ಸಂದರ್ಭದಲ್ಲಿ ಅವಘಡ ಸಂಭವಿಸಿತ್ತು. ಹೆಲಿಕಾಪ್ಟರ್ ರೇನ್ವೇ ನಿಂದ ಕೆಳಗಿಳಿದ ಹಿನ್ನೆಲೆಯಲ್ಲಿ ಘಟನೆ ನಡೆದಿತ್ತು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ತರಬೇತಿ ವಿಮಾನ ಪತನ: ಮಹಿಳಾ ಟ್ರೈನಿ ಪೈಲಟ್ ಸೇರಿ ಇಬ್ಬರ ಸಾವು