ಚಾಮರಾಜನಗರ: ಮಗನನ್ನು ಸೊಸೆ ತಮ್ಮಿಂದ ದೂರ ಮಾಡುತ್ತಿದ್ದಾಳೆಂದು ಕೊಲೆ ಮಾಡಿದ ಪ್ರಕರಣದಲ್ಲಿ ತಾಯಿ ಮತ್ತು ಇಬ್ಬರು ಹೆಣ್ಣುಮಕ್ಕಳಿಗೆ ಅಪರ ಹಾಗೂ ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಸಾಕಮ್ಮ, ಮಲ್ಲಮ್ಮ ಹಾಗೂ ರಾಜಮ್ಮ ಶಿಕ್ಷೆಗೊಳಗಾದವರು. ಚಾಮರಾಜನಗರ ತಾಲೂಕಿನ ಹಿರೇಬೇಗೂರು ಗ್ರಾಮದ ನಿವಾಸಿ ಸಾಕಮ್ಮ ತನ್ನ ಮಗ ಪ್ರಭುಸ್ವಾಮಿಗೆ 2008ರಲ್ಲಿ ಸುಧಾ ಎಂಬಾಕೆಯೊಂದಿಗೆ ವಿವಾಹ ಮಾಡಿಕೊಟ್ಟಿದ್ದರು. ಬಳಿಕ 2012ರಲ್ಲಿ ಸೊಸೆ ಸುಧಾ ಮನೆಗೆ ದರಿದ್ರ ತಂದಿದ್ದಾಳೆ. ಮಗನನ್ನು ತನ್ನಿಂದ ದೂರ ಮಾಡುತ್ತಿದ್ದಾಳೆಂದು ತನ್ನ ಇಬ್ಬರು ಅವಿವಾಹಿತ ಹೆಣ್ಣು ಮಕ್ಕಳಾದ ಮಲ್ಲಮ್ಮ, ರಾಜಮ್ಮಳೊಂದಿಗೆ ಸೇರಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ, ಬಳಿಕ ಬೆಂಕಿ ಆರಿಸುವ ನಾಟಕವಾಡಿದ್ದರು.
ಶೇ.80ರಷ್ಟು ಸುಟ್ಟ ಗಾಯಗಳಿಂದ ಗಂಭೀರ ಸ್ಥಿತಿಯಲ್ಲಿದ್ದ ಸುಧಾ, ತನಗೆ ಬೆಂಕಿ ಹಚ್ಚಿದ್ದು ಅತ್ತೆ ಮತ್ತು ನಾದಿನಿಯರು ಎಂದು ಸಾವಿಗೂ ಮೊದಲೇ ಹೇಳಿಕೆ ನೀಡಿದ್ದರು. ಮೃತ ಸುಧಾಳ ಹೇಳಿಕೆಯನ್ನು ಪರಿಗಣಿಸಿದ ನ್ಯಾಯಾಧೀಶರಾದ ವಿನಯ್, ಮೂವರಿಗೂ ಜೀವಾವಧಿ ಶಿಕ್ಷೆ ಹಾಗೂ ತಲಾ 15 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದ್ದಾರೆ. ಸರ್ಕಾರಿ ಅಭಿಯೋಜಕಾರಾಗಿ ಎಂ.ಉಷಾ ಪ್ರಕರಣವನ್ನು ವಾದಿಸಿದ್ದರು. ನಿರಂಜನಾ ರಾಜೇ ಅರಸ್ ತನಿಖಾಧಿಕಾರಿಯಾಗಿದ್ದರು.