ಚಾಮರಾಜನಗರ: ಪಾಳುಬಾವಿಗೆ ಬಿದ್ದಿದ್ದ ಚಿರತೆ ಇದ್ದಕ್ಕಿದ್ದಂತೆ ಮಾಯವಾಗಿದ್ದು ಅರಣ್ಯ ಇಲಾಖೆ ಬೇಸ್ತುಬಿದ್ದಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಹಸಗೂಲಿಯಲ್ಲಿ ನಡೆದಿದೆ.
ಮೂರು ದಿನದ ಹಿಂದೆ ಹಸಗೂಲಿಯ ಜಮೀನೊಂದರ ಪಾಳುಬಾವಿಗೆ ಚಿರತೆ ಬಿದ್ದಿತು. ಮಾಹಿತಿ ಪಡೆದ ಗುಂಡ್ಲುಪೇಟೆ ಆರ್ಎಫ್ಒ ಲೋಕೇಶ್ ನೇತೃತ್ವದ ತಂಡ ಅದನ್ನು ಸೆರೆ ಹಿಡಿಯಲು ನಾನಾ ಸರ್ಕಸ್ ನಡೆಸಿ ಕೊನೆಗೆ ಬೋನೊಂದನ್ನು ಬಾವಿಯೊಳಕ್ಕೆ ಇಟ್ಟಿದ್ದರು. ಆದರೆ, ಎರಡು ದಿನಗಳಿಂದ ಚಿರತೆ ಸುಳಿವಾಗಲಿ, ಅದರ ಗುಟುರಾಗಲೀ ಇಲ್ಲವಾದ್ದರಿಂದ ಚಿರತೆ ಬಾವಿಯಿಂದ ಪರಾರಿಯಾಗಿರಬಹುದು ಎಂದು ಈಗ ಶಂಕಿಸಲಾಗಿದೆ.
ಬಾವಿಗೆ ಬಿದ್ದಿದ್ದ ಚಿರತೆ ಪರಾರಿಯಾಗಿದ್ದರೇ ಅರಣ್ಯ ಇಲಾಖೆಯ ನಿರ್ಲಕ್ಷ್ಯ ಎದ್ದು ಕಾಣಲಿದೆ ಎಂದು ಸ್ಥಳೀಯ ರೈತರು ದೂರಿದ್ದಾರೆ. ಈ ಕುರಿತು ಆರ್ಎಫ್ಒ ಲೋಕೇಶ್ ಈಟಿವಿ ಭಾರತಕ್ಕೆ ಮಾತನಾಡಿ, ಚಿರತೆ ಹೊರ ಹೋಗದಂತೆ ಬಲೆ ಹಾಕಲಾಗಿತ್ತು. ಆದರೂ ಬಹುಪಾಲು ಅದು ಪರಾರಿಯಾಗಿದೆ. ಸತ್ತಿರುವ ಸಾಧ್ಯತೆ ತೀರಾ ಕಡಿಮೆ. ಬಾವಿಯೊಳಗೇ ಬೋನನ್ನು ಹಾಗೇ ಇರಿಸಲಾಗಿದ್ದು ನಿಗಾ ಇಡುವ ಸಲುವಾಗಿ ಕ್ಯಾಮೆರಾ ಅಳವಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ ಬಾವಿಯೊಳಗಿನ ಚಿರತೆ ಪರಾರಿಯಾಗಿರುವುದು ಇಲ್ಲವೇ ಮೃತಪಟ್ಟಿರುವ ಬಗ್ಗೆ ಖಾತ್ರಿಗಾಗಿ ಕೆಲ ದಿನ ಕಾಯಲೇಬೇಕಿದೆ.