ಚಾಮರಾಜನಗರ: ಪ್ರೇಮಿಗಳ ದಿನದ ಪ್ರಯುಕ್ತ 5 ದಿನಗಳ ಕಾಲ ರಜೆ ಕೊಡಿ ಸರ್ ಎಂದು ಕೊಳ್ಳೇಗಾಲ ವಿದ್ಯಾರ್ಥಿಯೋರ್ವನ ರಜಾ ಅರ್ಜಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಕೊಳ್ಳೇಗಾಲದ ಮಹದೇಶ್ವರ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಶಿವರಾಜು ಎಸ್ ಎಂಬ ವಿದ್ಯಾರ್ಥಿ ಹೆಸರಲ್ಲಿ ಈ ಅರ್ಜಿ ಇದ್ದು, ಸಾಲದ್ದಕ್ಕೆ ಪ್ರಾಂಶುಪಾಲ ಸೀಗನಾಯಕ ಅವರ ಹಸಿರು ಶಾಹಿಯ ಸಹಿ, ಮೊಹರು ಕೂಡ ಇದೆ. ಸದ್ಯ ವಾಟ್ಸಾಪ್, ಎಫ್ಬಿಯಲ್ಲಿ ಈ ರಜೆ ಅರ್ಜಿ ಸಖತ್ ಸದ್ದು ಮಾಡುತ್ತಿದೆ. ಪ್ರೇಮಿಗಳ ದಿನ ಹತ್ತಿರ ಬರುತ್ತಿದ್ದು, ಹುಡುಗಿಯರ ಕಾಟ ತಡೆಯಲಾಗುತ್ತಿಲ್ಲ, ತನಗೆ 5 ದಿನ ರಜೆ ಬೇಕೆಂದು ಕಳೆದ 9ರಂದು ಈ ಅರ್ಜಿ ಬರೆಯಲಾಗಿದೆ.
ಈ ಸುದ್ದಿಯನ್ನೂ ಓದಿ: ಉಪ್ಪಾರ ಸಮುದಾಯದ ಬೇಡಿಕೆ ಈಡೇರಿಸಲು ಬದ್ದ : ಸಚಿವ ಕೆ.ಎಸ್. ಈಶ್ವರಪ್ಪ
ಈ ಬಗ್ಗೆ ಪ್ರಾಂಶುಪಾಲ ಸೀಗನಾಯಕ ಪ್ರತಿಕ್ರಿಯಿಸಿದ್ದು, ತನ್ನ ಸಹಿಯನ್ನು ಯಾರೋ ನಕಲಿ ಮಾಡಿ, ಕದ್ದು ಮೊಹರನ್ನು ಹಾಕಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಲಾಕ್ಡೌನ್ ವೇಳೆ ಬಾಡೂಟಕ್ಕಾಗಿ ರಜೆ ಅರ್ಜಿ ಸಲ್ಲಿಸಿದ್ದ ಪೊಲೀಸಪ್ಪನಂತೆ ಈಗ ವಿದ್ಯಾರ್ಥಿ ಪ್ರೇಮಿಗಳ ದಿನಕ್ಕಾಗಿ ರಜೆ ಕೋರಿರುವುದು ಕೆಲವರಿಗೆ ಹಾಸ್ಯ ಎನಿಸಿದರೆ, ಕೆಲವರಲ್ಲಿ ಆಕ್ರೋಶ ಉಂಟು ಮಾಡಿದೆ.