ಕೊಳ್ಳೇಗಾಲ(ಚಾಮರಾಜನಗರ): ಕಾಣೆಯಾಗಿದ್ದ ಗೃಹಿಣಿಯನ್ನು ಪತ್ತೆ ಹಚ್ಚಿ ಗಂಡನೆದುರು ಕರೆತಂದಾಗ ತಾನು ಗಂಡನ ಮನೆಗೂ ಹೋಗಲ್ಲ, ತಂದೆಯ ಮನೆಗೂ ಹೋಗಲ್ಲ ಎಂದು ಹೇಳಿದ ಆಕೆ ಮತ್ತೆ ನಾಪತ್ತೆಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
20 ದಿನಗಳ ಹಿಂದೆ ಹಳೆ ಅಣಗಳ್ಳಿ ಗ್ರಾಮದ ರಾಚಪ್ಪ ಎಂಬವರ ಪತ್ನಿ ಜಯಮ್ಮ ಎಂಬಾಕೆ ಕಾಣೆಯಾಗಿದ್ದಾಳೆ ಎಂದು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರು ಸ್ವೀಕರಿಸಿದ್ದ ಪೊಲೀಸರು ನಾಪತ್ತೆಯಾಗಿದ್ದ ಗೃಹಿಣಿ ಹುಡುಕಿ ಕರೆತಂದು ಗಂಡನಿಗೆ ಒಪ್ಪಿಸಿದಾಗ ಈಕೆ ಬೇರೆಯವನ ಜೊತೆ ಹೋಗಿದ್ದಾಳೆ. ನನಗೆ ಈಕೆ ಬೇಡ ಎಂದು ಅವಳನ್ನು ಬಿಟ್ಟೋಗಿದ್ದ. ಈ ಸಂದರ್ಭದಲ್ಲಿ ಜಯಮ್ಮಳು, ನಾನು ಗಂಡನ ಮನೆಗೂ ಹೋಗಲ್ಲ. ಗುಂಡೇಗಾಲದಲ್ಲಿರುವ ತಂದೆಯ ಮನೆಗೂ ಹೋಗಲ್ಲ ಎಂದು ಹೊರಟು ಹೋಗಿದ್ದಾಳೆ ಎನ್ನಲಾಗ್ತಿದೆ.
ನಂತರ, ಹಳೇ ಅಣಗಳ್ಳಿ ಹಾಗೂ ಗುಂಡೇಗಾಲ ಗ್ರಾಮದ ಮುಖಂಡರು ರಾಚಪ್ಪನ ಜೊತೆ ಬಂದು ಜಯಮ್ಮ ಎರಡು ಊರಿನಲ್ಲೂ ಇಲ್ಲ, ಅವಳು ಕಾಣೆಯಾಗಿದ್ದಾಳೆ. ಅವಳನ್ನು ಹುಡುಕಿಕೊಡಿ ನಾವು ನ್ಯಾಯ ಪಂಚಾಯಿತಿ ಮಾಡುತ್ತೇವೆ ಎಂದು ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ. ಆದರೆ ಒಮ್ಮೆ ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದಕ್ಕೆ ಹುಡುಕಿಕೊಟ್ಟಿದ್ದೇವೆ. ಗಂಡನೇ ಇವಳು ಬೇಡವೆಂದು ಹೊರಟು ಹೋದನು. ಮತ್ತೆ ಹೆಂಡತಿ ಬೇಕು ಎಂದರೆ ಏನು ಮಾಡಲು ಸಾಧ್ಯ ಎಂದು ಪೊಲೀಸರು ಗರಂ ಆಗಿದ್ದಾರೆ.
ಗ್ರಾಮದ ಮುಖಂಡರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಚೀಟಿಯಲ್ಲಿ ತನ್ನ ಗಂಡ ರಾಚಪ್ಪನ ಹೆಸರು ಬರೆಸುವ ಜಾಗದಲ್ಲಿ ಅದೇ ಗ್ರಾಮದ ಲೋಕೇಶ್ ಎಂಬುವನ ಹೆಸರು ಬರೆಸಿದ್ದಾಳೆ. ಇವನೇ ಜಯಮ್ಮನನ್ನು ಕರೆದುಕೊಂಡು ಹೋಗಿರಬಹುದು ಎಂದು ಶಂಕಿಸಿದ್ದಾರೆ.