ಕೊಳ್ಳೇಗಾಲ(ಚಾಮರಾಜನಗರ): ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625 ಕ್ಕೆ 621 ಅಂಕ ಪಡೆದು ಜಿಲ್ಲೆಗೆ ಟಾಪರ್ ಆಗಿ ಹೊರಹೊಮ್ಮಿರುವ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಅವರ ಮಗಳಾದ ಅನನ್ಯ ರಾಜ್ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಜೊತೆಗೆ ಎಸ್ಪಿ ದಿವ್ಯಾ ಸಾರಾ ಥಾಮಸ್ ಸ್ವತಃ ಮನೆಗೆ ಭೇಟಿ ನೀಡಿ ಬಾಲಕಿಯನ್ನು ಅಭಿನಂದಿಸಿದ್ದಾರೆ.
ಪಟ್ಟಣದ ಆದರ್ಶ ನಗರದ ನಿವಾಸಿ ರಾಧಾ ಎಂಬವರು ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ಕಾರ್ಯ ನಿರ್ವವಹಿಸುತ್ತಿದ್ದಾರೆ. ಇವರ ಮಗಳು ಅನನ್ಯ ರಾಜ್ 10ನೇ ತರಗತಿ ಪರೀಕ್ಷೆಯಲ್ಲಿ ಜಿಲ್ಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದಾಳೆ. ವಿಚಾರ ತಿಳಿದ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್, ಇಲಾಖಾ ಅಧಿಕಾರಿಗಳ ಜತೆ ವಿದ್ಯಾರ್ಥಿನಿ ಮನೆಗೆ ಖುದ್ದು ಭೇಟಿ ನೀಡಿ ಪ್ರಶಂಸಿದ್ದು ಸನ್ಮಾನ ಮಾಡಿದ್ದಾರೆ.
ಈ ವೇಳೆ ಮಾತನಾಡಿದ ಎಸ್ಪಿ, ಈಕೆಯ ಸಾಧನೆ ಇಲಾಖೆಗೆ ಹೆಮ್ಮೆ ತಂದಿದೆ. ಮುಂದಿನ ಶೈಕ್ಷಣಿಕ ಹಾದಿಯಲ್ಲಿ ಮತ್ತಷ್ಟು ಯಶಸ್ಸು ಪಡೆಯಲಿ. ಜೀವನ ಉಜ್ವಲವಾಗಲಿ ಎಂದು ಹಾರೈಸಿದರು.
ವೈದ್ಯೆಯಾಗುವ ಕನಸು: ಅನನ್ಯ ರಾಜ್ ಉನ್ನತ ಶಿಕ್ಷಣದಲ್ಲಿ ಮೆಡಿಕಲ್ ಫೀಲ್ಡ್ ಆಯ್ಕೆ ಮಾಡಿಕೊಂಡು ವೈದ್ಯೆಯಾಗುವ ಕನಸನ್ನು ಹೊಂದಿದ್ದಾಳೆ. ಆಕೆಯ ಆಸೆ ಈಡೇರಲಿ, ಚೆನ್ನಾಗಿ ಓದು ಎಂದು ನಗದು ಬಹುಮಾನ ನೀಡಿ ದಿವ್ಯಾ ಸಾರಾ ಥಾಮಸ್ ಹುರಿದುಂಬಿಸಿದರು.
ಇದಕ್ಕೂ ಮುನ್ನ ಶಾಸಕ ಎನ್.ಮಹೇಶ್ ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿ ಸನ್ಮಾನಿಸಿ, ಸಿಹಿ ತಿನಿಸುವ ಮೂಲಕ ಅಭಿನಂದಿಸಿದ್ದರು.