ಕೊಳ್ಳೇಗಾಲ : ಅಪ್ರಾಪ್ತ ಬಾಲಕಿಯನ್ನು ವ್ಯಕ್ತಿಯೋರ್ವ ಅಪಹರಿಸಿ ವಿವಾಹವಾಗಿರುವ ಘಟನೆ ನಡೆದಿದ್ದು, ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಚಾಮರಾಜನಗರದ ಚಂದಕವಾಡಿ ನಿವಾಸಿಯಾಗಿದ್ದ ಮಹದೇವಸ್ವಾಮಿ ಬಂಧಿತ ಆರೋಪಿ. ಈತ ಕೊಳ್ಳೇಗಾಲ ಪಟ್ಟಣದ ಬಡಾವಣೆಯೊಂದರಲ್ಲಿ ಬಾಡಿಗೆ ಮನೆಯಲ್ಲಿ ಕಳೆದ ಐದಾರು ವರ್ಷಗಳಿಂದ ವಾಸವಿದ್ದನು. ಅ.25 ರಂದು ತಮ್ಮ ಮಾಲೀಕನ ಮನೆಯಲ್ಲಿ ವಾಸವಿದ್ದ ಅಪ್ರಾಪ್ತೆಯನ್ನು ಅಪಹರಿಸಿ ಬೆಂಗಳೂರಿಗೆ ಕರೆದೊಯ್ದಿದ್ದನು.
ಈ ಸಂಬಂಧ ಬಾಲಕಿ ತಾಯಿ ಪಟ್ಟಣ ಠಾಣೆಯ ಪೊಲೀಸರಿಗೆ ಮಗಳು ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ತಿಳಿಸಿದ್ದು, ಬಾಡಿಗೆದಾರ ಮಹದೇಸ್ವಾಮಿ ಎಂಬುವನು ಮಗಳನ್ನು ಅಪಹರಿಸಿರಬಹುದೆಂದು ಶಂಕಿಸಿ ದೂರು ನೀಡಿದ್ದರು.
ಬಳಿಕ ಪ್ರಕರಣ ಬೆನ್ನತ್ತಿದ್ದ ಪೊಲೀಸರಿಗೆ ಬೆಂಗಳೂರಿನಲ್ಲಿ ಬಾಲಕಿ ಪತ್ತೆಯಾಗಿದ್ದು, ಈ ವೇಳೆ ಬಾಲಕಿಯನ್ನು ಆರೋಪಿ ಮಹದೇವಸ್ವಾಮಿ ಮದುವೆಯಾಗಿದ್ದಾನೆ ಎಂದು ತಿಳಿದು ಬಂದಿದೆ. ವಿಚಾರಣೆ ವೇಳೆ ಆರೋಪಿಗೆ ಈಗಾಗಲೇ ಮದುವೆಯಾಗಿದೆ ಎಂಬುದು ಬೆಳಕಿಗೆ ಬಂದಿತ್ತು.
17 ವರ್ಷದ ಬಾಲಕಿಗೆ ಅಪಹರಿಸಿ ಕರೆದೊಯ್ದು ತಾಳಿ ಕಟ್ಟಿದ್ದಾನೆ. ಸದ್ಯ ಮಹದೇವಸ್ವಾಮಿಯನ್ನು ಬಂಧಿಸಲಾಗಿದ್ದು, ಪಿಎಸ್ಐ ಚೇತನ್ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಗಗನಕ್ಕೇರಿದ ತರಕಾರಿ ಬೆಲೆ : ದುಬಾರಿ ದುನಿಯಾದಲ್ಲಿ ಗ್ರಾಹಕರು-ಮಾರಾಟಗಾರರು ತತ್ತರ