ಚಾಮರಾಜನಗರ : ಚುನಾವಣೆಗೆ ಇನ್ನೂ ಒಂದು ವರ್ಷವಿರುವಾಗಲೇ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ಗೆ ಹಾಲಿ ಎಂಎಲ್ಎ ಸೇರಿದಂತೆ ರೇಸ್ನಲ್ಲಿ ಐವರಿದ್ದು, ಈಗ ಸಂಸದ ಶ್ರೀನಿವಾಸ್ ಪ್ರಸಾದ್ ಅಳಿಯ ಡಾ.ಮೋಹನ್ ಹೆಸರು ಮುನ್ನೆಲೆಗೆ ಬಂದಿದೆ.
ಹಾಲಿ ಎಂಎಲ್ಎ ಎನ್.ಮಹೇಶ್, ಮಾಜಿ ಶಾಸಕ ಜಿ.ಎನ್ ನಂಜುಂಡಸ್ವಾಮಿ ಜತೆಗೆ ಕಿನಕಹಳ್ಳಿ ರಾಚಯ್ಯ, ಚಾಮರಾಜನಗರ ಸಿಪಿಐ ಪುಟ್ಟಸ್ವಾಮಿ ಹಾಗೂ ಮತ್ತೋರ್ವ ಪೊಲೀಸ್ ಅಧಿಕಾರಿ ಪಟ್ಟಿಯಲ್ಲೀಗ ಸಂಸದ ಶ್ರೀನಿವಾಸ್ ಪ್ರಸಾದ್ ಅವರ ಎರಡನೇ ಅಳಿಯ, ವೈದ್ಯ ಡಾ.ಮೋಹನ್ ಹೆಸರು ಕೇಳಿ ಬಂದಿದ್ದು, ಟಿಕೆಟ್ ರೇಸ್ನಲ್ಲಿ ಎಲ್ಲರಿಗಿಂತಲೂ ಮುಂದಿದ್ದಾರೆ ಎಂಬ ಮಾತು ಬಿಜೆಪಿಯ ಹೈಕಮಾಂಡ್ ಸಂಘ ಪರಿವಾರದಿಂದಲೇ ಕೇಳಿ ಬಂದಿದೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೈಸೂರು ವಿಭಾಗದ ಹಿರಿಯರೊಬ್ಬರು ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, ಕಳೆದ ಒಂದು ವರ್ಷಗಳಿಂದ ಆಂತರಿಕ ಸರ್ವೇ ಮಾಡಲಾಗುತ್ತಿದ್ದು, ಹೊಸ ಮುಖಕ್ಕೆ ಮಣೆ ಹಾಕಬೇಕು, ಅದರೊಟ್ಟಿಗೆ ದಲಿತ ನಾಯಕತ್ವವನ್ನು ಬೆಳೆಸಬೇಕೆಂಬ ಕೂಗು ಕೇಳಿ ಬಂದಿದೆ.
ಈಗಾಗಲೇ 3ನೇ ಬಾರಿ ಸರ್ವೇ ಕಾರ್ಯ ನಡೆಯುತ್ತಿದ್ದು, ಡಾ.ಮೋಹನ್ ಅವರ ಪರ ಅಭಿಪ್ರಾಯ ಹೆಚ್ಚು ವ್ಯಕ್ತವಾಗಿದೆ. ಸಂಘ ಪರಿವಾರ, ಸಮುದಾಯದ ಮುಖಂಡರು, ಸ್ವಾಮೀಜಿಗಳು ಹಾಗೂ ಕಾರ್ಯಕರ್ತರು ಎಲ್ಲರ ಅಭಿಪ್ರಾಯ ಸಂಗ್ರಹಿಸಿ ವಿಸ್ತ್ರತವಾದ ವರದಿ ವರಿಷ್ಠರಿಗೆ ಸಲ್ಲಿಕೆಯಾಗಲಿದೆ ಎಂದು ತಿಳಿಸಿದರು.
ಡಾ.ಮೋಹನ್ ಸಂಘ ಪರಿವಾರದಲ್ಲಿ ಹೆಚ್ಚು ಗುರುತಿಸಿಕೊಂಡಿರುವುದು, ವಿದ್ಯಾವಂತರಾಗಿರುವುದು ಮಠ-ಮಾನ್ಯಗಳ ಆಶೀರ್ವಾದ ಇರುವುದು ಪ್ಲಸ್ ಅಗಿ ಅಚ್ಚರಿ ಅಭ್ಯರ್ಥಿಯಾಗಿ ಹೊರಹೊಮ್ಮಿದರೂ ಅಚ್ಚರಿಯಿಲ್ಲ. ಇನ್ನೊಂದೆಡೆ ತಮಗೆ ಬಿಜೆಪಿ ಟಿಕೆಟ್ ಪಕ್ಕಾ ಎಂದು ಚಾಮರಾಜನಗರ ಸಿಪಿಐ ಪುಟ್ಟಸ್ವಾಮಿ ಓಡಾಡುತ್ತಿದ್ದು, ಅವರ ಬೆಂಬಲಿಗರು ಈಗಾಗಲೇ ಸಾಕಷ್ಟು ಬೆವರು ಹರಿಸುತ್ತಿದ್ದಾರೆ.
ಕೋಟೆ ಕಟ್ಟಿ ಸುಮ್ಮನಾಗುವರೋ, ಇಲ್ಲಾ ಚುನಾವಣಾ ಕಣಕ್ಕೆ ಧುಮುಕುವರೋ ಎಂಬುದು ಮೇ ತಿಂಗಳಿನಲ್ಲಿ ಉತ್ತರ ತಿಳಿಯಲಿದೆ. ಇದರೊಂದಿಗೆ ಹಾಲಿ ಎಂಎಲ್ಎ ಮಹೇಶ್, ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ಕೈ ಬಿಟ್ಟು ಕಮಲ ಹಿಡಿದಿರುವ ಕಿನಕಹಳ್ಳಿ ರಾಚಯ್ಯ ಅಚ್ಚರಿ ಅಭ್ಯರ್ಥಿಗೆ ಮಣೆ ಹಾಕುವರೇ ಎಂಬ ಹತ್ತಾರು ಪ್ರಶ್ನೆಗಳು ರಾಜಕೀಯ ಪಡಸಾಲೆಯಲ್ಲಿ ನಿತ್ಯದ ಹರಟೆ ಸರಕಾಗಿದೆ.
ಇದನ್ನೂ ಓದಿ: ದೇಶದಲ್ಲಿ ತಿಂಗಳಿಗೊಮ್ಮೆ ಚುನಾವಣೆ ನಡೆಯಲಿ: ಬೆಲೆ ಏರಿಕೆ ಬಗ್ಗೆ ಸಂಸದೆ ಸುಪ್ರಿಯಾ ಸುಳೆ ವ್ಯಂಗ್ಯ