ಚಾಮರಾಜನಗರ: ಜಿಲ್ಲೆಯಲ್ಲಿ ಆಹಾರ ಸಂಸ್ಕರಣ ಉದ್ದಿಮೆ ಸ್ಥಾಪನೆಗೆ ಹೇರಳ ಅವಕಾಶಗಳಿರುವುದರಿಂದ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಅವರನ್ನು ಚಾಮರಾಜನಗರ ರಾಯಭಾರಿಯನ್ನಾಗಿ ಮಾಡಬೇಕೆಂದು ಕಾಸಿಯಾ ಅಧ್ಯಕ್ಷ ಅರಸಪ್ಪ ಮನವಿ ಮಾಡಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ವಿಫುಲ ಅವಕಾಶಗಳಿವೆ. ಆದರೆ, ಮೂಲಸೌಕರ್ಯ ಕೊರತೆಯಿಂದ ಉದ್ಯಮಿಗಳು ಮುಂದೆ ಬರುತ್ತಿಲ್ಲ. ಆದ್ದರಿಂದ, ಕಿರಣ್ ಮಜುಂದಾರ್ ಅವರನ್ನು ರಾಯಭಾರಿಯನ್ನಾಗಿ ಮಾಡಿ, 'ಇನ್ವೆಸ್ಟ್ ಇನ್ ಚಾಮರಾಜನಗರ' ಎಂಬ ಅಭಿಯಾನವನ್ನು ಸರ್ಕಾರ ಮಾಡಬೇಕೆಂದು ಅವರು ಒತ್ತಾಯಿಸಿದರು.
ಚಾಮರಾಜನಗರ ಜಿಲ್ಲೆಯ ಸಂತೇಮರಳ್ಳಿಯಿಂದ ಮೂಗೂರು ಕ್ರಾಸ್ ವರೆಗಿನ 12 ಕಿ.ಮೀ. ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಬೇಕು. ಬದನಗುಪ್ಪೆ- ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನೀರು ಸರಬರಾಜಿನ ಕೊರತೆಯಿಂದಾಗಿ ಕೈಗಾರಿಕೋದ್ಯಮಿಗಳು ತೊಂದರೆಗೀಡಾಗಿದ್ದು, ಈ ಸಮಸ್ಯೆಯನ್ನು ಸರ್ಕಾರ ಶೀಘ್ರವಾಗಿ ಪರಿಹರಿಸಬೇಕೆಂದು ಅವರು ಮನವಿ ಮಾಡಿದರು.
ಕೈಗಾರೀಕರಣದಲ್ಲಿ ಚಾಮರಾಜನಗರ ಜಿಲ್ಲೆ ಹಿಂದುಳಿದ ಜಿಲ್ಲೆಯಾಗಿರುವುದರಿಂದ, ನೂತನ ಉದ್ದಿಮೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಜಿಲ್ಲೆಯಲ್ಲಿ ನೂತನ ಉದ್ದಿಮೆಗಳಿಗೆ 5 ವರ್ಷಗಳ ಕಾಲ ಜಿ.ಎಸ್.ಟಿ. ಪಿ.ಎಫ್. ಮತ್ತು ಇ.ಎಸ್.ಐ. ಆಸ್ತಿ ತೆರಿಗೆ ಹಾಗೂ ವಿದ್ಯುತ್ ಬಳಕೆಯ ಮೇಲಿನ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಬೇಕೆಂದು ಅವರು ಆಗ್ರಹಿಸಿದರು.