ಚಾಮರಾಜನಗರ : ನಿವೇಶನದೊಂದಿಗೆ ರಸ್ತೆ ವಿಸ್ತರಣೆಗೆ ಮೀಸಲಿರಿಸಿದ್ದ ಜಾಗವನ್ನು ಮಾರಾಟ ಮಾಡಿದ್ದ ಕರ್ನಾಟಕ ಗೃಹ ಮಂಡಳಿಗೆ ನಗರ ಗ್ರಾಹಕರ ವೇದಿಕೆಯು ಬಾರಿ ಪ್ರಮಾಣ ದಂಡ ವಿಧಿಸಿದೆ.
ರಾಮಸಮುದ್ರ ಬಡಾವಣೆಯಲ್ಲಿನ ನಿವೇಶನಗಳನ್ನು ಕರ್ನಾಟಕ ಗೃಹ ಮಂಡಳಿಯು 2012ರಲ್ಲಿ ಬಹಿರಂಗ ಹರಾಜು ಮಾಡಿತ್ತು. ಎಂಐಜಿ 70 ಸಂಖ್ಯೆ ನಿವೇಶನವನ್ನು ಕಾಗಲವಾಡಿಯ ನಿವಾಸಿಗಳಾದ ನಂಜುಂಡಸ್ವಾಮಿ ಎಂಬುವವರು ಖರೀದಿಸಿದ್ದರು. ನಿವೇಶನಕ್ಕೆ ಹೊಂದಿಕೊಂಡಿದ್ದ ದಕ್ಷಿಣದ ರಸ್ತೆ 18 ಮೀಟರ್ ವಿಸ್ತರಣೆ ಮಾಡಿ ನಗರ ಅಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆ ಪಡೆಯಲಾಗಿತ್ತು. ಅದರಂತೆ ರಸ್ತೆ ವಿಸ್ತರಣೆಗೆ ಮೀಸಲಿರಿಸಿದ್ದ ಜಾಗವನ್ನು ಹೊರತುಪಡಿಸಿ ಮಾರಾಟ ಮಾಡಬೇಕಾಗಿದ್ದ ಕರ್ನಾಟಕ ಗೃಹ ಮಂಡಳಿ ರಸ್ತೆಗೆ ಮೀಸಲಿರಿಸಿದ್ದ ಜಾಗವನ್ನು ಸೇರಿಸಿ ಮಾರಾಟ ಮಾಡಿತ್ತು. ಇದರ ವಿರುದ್ಧ ಜಿಲ್ಲಾ ಗ್ರಾಹಕರ ವೇದಿಕೆಯಲ್ಲಿ ಮೊಕದ್ದಮೆ ದಾಖಲಿಸಲಾಗಿತ್ತು.
ವಾದ- ಪ್ರತಿವಾದ ಆಲಿಸಿದ ಬಳಿಕ ಗ್ರಾಹಕರ ವೇದಿಕೆಯು ಕರ್ನಾಟಕ ಗೃಹ ಮಂಡಳಿ ಮಾಡಿರುವ ತಪ್ಪಿಗೆ 3.30 ಲಕ್ಷ ರೂ. ದಂಡಕ್ಕೆ ಶೇ 8ರಷ್ಟು ಬಡ್ಡಿ ಸೇರಿಸಿ ಒಟ್ಟು 5,10,750 ರೂ. ಪರಿಹಾರ ಹಾಗೂ ಇಲಾಖೆ ಮಾಡಿದ ತಪ್ಪಿಗೆ 20,000 ರೂ., ಪ್ರಕರಣದಿಂದ ದೂರುದಾರರಿಗೆ ನೀಡಿದ ಮಾನಸಿಕ ಹಿಂಸೆಗೆ 10,000 ರೂ. ಮತ್ತು ವ್ಯಾಜ್ಯದ ಖರ್ಚು 5000 ರೂ. ವಿಧಿಸಿ ಆದೇಶ ಹೊರಡಿಸಿದೆ. ಸರ್ಕಾರಿ ಇಲಾಖೆಯೇ ರಸ್ತೆಯನ್ನು ಮಾರಾಟ ಮಾಡಿದ ಈ ಪ್ರಕರಣದಿಂದ ಕರ್ನಾಟಕ ಗೃಹ ಮಂಡಳಿ ತೀವ್ರ ಮುಜುಗರ ಅನುಭವಿಸಬೇಕಾಗಿದೆ.