ಚಾಮರಾಜನಗರ : ದೇಶದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ನಂ.1 ರಾಜ್ಯ ಎಂಬ ಕೀರ್ತಿಗೆ ಪಾತ್ರವಾಗಿದ್ದ ಕರ್ನಾಟಕ ಈ ಸಾರಿ ನಂಬರ್ ಎರಡನೇ ಸ್ಥಾನಕ್ಕೆ ಕುಸಿದಿದೆ.
ಹುಲಿಗಳ ಸಂಖ್ಯೆಯಲ್ಲಿ ರಾಜ್ಯವಾರು ವಿಂಗಡಣೆಯಲ್ಲಿ ಕಳೆದ ಕೆಲ ವರ್ಷಗಳಿಂದ ಮೊದಲ ಸ್ಥಾನದಲ್ಲಿದ್ದ ಕರ್ನಾಟಕ ಸದ್ಯದ ಅಂಕಿ-ಅಂಶದ ಪ್ರಕಾರ ಮೊದಲ ಸ್ಥಾನದಿಂದ ಕೆಳಕ್ಕಿಳಿದಿದೆ. 526 ಹುಲಿಗಳೊಂದಿಗೆ ಮಧ್ಯ ಪ್ರದೇಶ ಅಗ್ರಸ್ಥಾನಕ್ಕೇರಿದೆ. ನಂತರದ ಸ್ಥಾನದಲ್ಲಿರುವ ಕರ್ನಾಟಕದಲ್ಲಿ 524 ಹುಲಿಗಳಿದ್ದು, ಮೂರನೇ ಸ್ಥಾನದಲ್ಲಿರುವ ಉತ್ತರಾಖಂಡದಲ್ಲಿ 442 ಹುಲಿಗಳು ವಾಸಿಸುತ್ತಿವೆ.
ರಾಜ್ಯದ ಚಾಮರಾಜ ನಗರ ಭಾರತದಲ್ಲಿಯೇ ಅತಿ ಹೆಚ್ಚು ಹುಲಿ ಹೊಂದಿರುವ ಪ್ರದೇಶ ಎಂಬ ಕೀರ್ತಿಗೆ ಪಾತ್ರವಾಗಿತ್ತು. ಶೇ.51 ರಷ್ಟು ಅರಣ್ಯ ಪ್ರದೇಶದಿಂದ ಕೂಡಿರುವ ಚಾಮರಾಜನಗರ ಜಿಲ್ಲೆಗೆ ಹುಲಿರಾಯ ಕಳಶಪ್ರಾಯವಾಗಿದೆ. 2018 ರಲ್ಲಿ ನಡೆದ ಗಣತಿ ಪ್ರಕಾರ ಜಿಲ್ಲೆಯಲ್ಲಿ 200 ಹುಲಿಗಳಿವೆ ಎಂಬ ಮಾಹಿತಿ ಹೊರ ಬಂದಿತ್ತು.
ಮಲೆಮಹದೇಶ್ವರ ವನ್ಯಜೀವಿಧಾಮದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಹುಲಿ ಸಂರಕ್ಷಿತ ಪ್ರದೇಶ ಮಾಡುವ ಪ್ರಸ್ತಾಪ ಸರ್ಕಾರದ ಮುಂದಿದೆ. ಒಂದು ವೇಳೆ, ಮಲೆಮಹದೇಶ್ವರ ವನ್ಯಧಾಮ ಹುಲಿ ಸಂರಕ್ಷಿತ ಪ್ರದೇಶವಾದರೇ ಜಿಲ್ಲೆಯಲ್ಲಿ ಬಿಆರ್ಟಿ, ಬಂಡೀಪುರ ಸೇರಿದಂತೆ 3 ಹುಲಿ ಸಂರಕ್ಷಿತ ಪ್ರದೇಶಗಳಾಗುವುದು ರಾಜ್ಯಕ್ಕೆ ಹೆಮ್ಮೆಯ ವಿಷಯ.
ಕಾವೇರಿ ವನ್ಯಜೀವಿಧಾಮದಲ್ಲೂ ಹುಲಿಗಳು ವಾಸಿಸುತ್ತಿರುವುದು ಪತ್ತೆಯಾಗಿದ್ದು ಕ್ಯಾಮೆರಾ ಟ್ರಾಪಿಗ್ನಲ್ಲಿ 4-5 ಹುಲಿಗಳು ಸೆರೆಯಾಗಿವೆ. ದೊಡ್ಡ ಪ್ರದೇಶದಲ್ಲಿ ಹುಲಿ ಸಂತತಿ ಹೆಚ್ಚುತ್ತಿರುವುದರಿಂದ ಕೆಲವೇ ವರ್ಷಗಳಲ್ಲಿ ಹುಲಿಗಳ ಸಂಖ್ಯೆ ದುಪ್ಪಟ್ಟಾಗಲಿದೆ ಎನ್ನುತ್ತಾರೆ ಪರಿಸರ ತಜ್ಞರು.
2014ರ ಗಣತಿ ಪ್ರಕಾರ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ 138, ಬಿಳಿಗಿರಿರಂಗನಾಥಸ್ವಾಮಿ ದೇವಸ್ಥಾನ ಹುಲಿ ಸಂರಕ್ಷಿತ ಅರಣ್ಯ (ಬಿಆರ್‌ಟಿ) ಪ್ರದೇಶದಲ್ಲಿ 35, ಮಲೆ ಮಹದೇಶ್ವರ ವನ್ಯಧಾಮದಲ್ಲಿ 15 ಹಾಗೂ ಕಾವೇರಿ ವನ್ಯಧಾಮದಲ್ಲಿ 4ರಿಂದ5 ಹುಲಿಗಳಿವೆ ಎಂದು ತಿಳಿದುಬಂದಿತ್ತು. ಇವುಗಳ ಒಟ್ಟಾರೆ ಸಂಖ್ಯೆ ಈಗ 200 ದಾಟುಬಹುದು ಎನ್ನುತ್ತವೆ ಮೂಲಗಳು.