ಚಾಮರಾಜನಗರ: 2020ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಪ್ರಕಟಿಸಿದ ಪ್ರಶಸ್ತಿ ಪಟ್ಟಿಯಲ್ಲಿ ಜಿಲ್ಲೆಯ ಕನ್ನಡ ಪ್ರಾಧ್ಯಾಪಕ ಹಾಗೂ ಯಕ್ಷಗಾನ ಕಲಾವಿದರೊಬ್ಬರಿಗೆ ಪ್ರಶಸ್ತಿ ಲಭಿಸಿದೆ.
ನಗರದ ರಾಮಸಮುದ್ರ ಬಡಾವಣೆಯ ಡಾ. ರಾಮಕೃಷ್ಣ ಅವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಹಾಗೂ ಯಕ್ಷಗಾನ ಕಲೆ ವಿಭಾಗದಲ್ಲಿ ಗುಂಡ್ಲುಪೇಟೆ ತಾಲೂಕಿನ ಕಬ್ಬಹಳ್ಳಿ ಗ್ರಾಮದ ಬಂಗಾರ್ ಆಚಾರ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದೆ. ಮೈಸೂರಿನ ಮಾನಸ ಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆ ವಿಭಾಗದಲ್ಲಿ 35 ವರ್ಷ ಇವರು ಸೇವೆ ಸಲ್ಲಿಸಿದ್ದು, 15ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಈಟಿವಿ ಭಾರತದ ಜೊತೆಗೆ ಸಂತಸ ಹಂಚಿಕೊಂಡ ಅವರು, ಈ ಪ್ರಶಸ್ತಿಯನ್ನು ತನ್ನೆಲ್ಲಾ ಗುರುಗಳಿಗೆ ಹಾಗೂ ಶಿಕ್ಷಕರಿಗೆ ಅರ್ಪಿಸುತ್ತೇನೆ. ಈ ಗೌರವಕ್ಕೆ ಪಾತ್ರವಾಗಿರುವುದು ಸಂತಸ ತಂದಿದೆ ಎಂದರು.
ಚಾಮರಾಜನಗರ ಜಿಲ್ಲೆಯಲ್ಲಿ ಅಪರೂಪವೇ ಆಗಿರುವ ಯಕ್ಷಗಾನ ಕಲೆಯಲ್ಲಿ ಸಾಧನೆ ಮಾಡಿರುವ ಬಂಗಾರ್ ಆಚಾರ್ ಅವರಿಗೆ ಈ ಹಿಂದೆ ಪಾರ್ಥಿಸುಬ್ಬ ಪ್ರಶಸ್ತಿಯೂ ಬಂದಿದೆ.