ಚಾಮರಾಜನಗರ: ಮಳೆ ಹೆಚ್ಚಾದಂತೆ, ಕಾವೇರಿ ನೀರಿನ ಮಟ್ಟ ಹೆಚ್ಚಾದಂತೆಲ್ಲಾ ಕೊಳ್ಳೇಗಾಲ ತಾಲೂಕಿನ 8ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರವಾಹ ಭೀತಿ ಆವರಿಸುತ್ತದೆ.ಕಬಿನಿ ಹಾಗೂ ಕೆಆರ್‌ಎಸ್ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರ ಬಿಡಲಾಗುತ್ತಿದ್ದು, ಕಾವೇರಿ ನದಿ ನೀರಿನ ಮಟ್ಟ ಮತ್ತಷ್ಟು ಹೆಚ್ಚಾಗಿದೆ.
ಮುಳ್ಳೂರು, ಹಳೆ ಹಂಪಾಪುರ, ದಾಸನಪುರ, ಹಳೆ ಅಣಗಳ್ಳಿ, ಹರಳೆ, ಸರಗೂರು, ಧನಗೆರೆ, ಎಡಕುರಿಯ, ಸತ್ತೇಗಾಲ ಸೇರಿದಂತೆ ನದಿಯ ಎರಡೂ ದಂಡೆಗಳಲ್ಲಿರುವ ಗ್ರಾಮಗಳು ಮತ್ತು ನದಿಯ ತಗ್ಗು ಪ್ರದೇಶದಲ್ಲಿ ವಾಸಿಸುತ್ತಿರುವ ಜನರು ತಮ್ಮ ಆಸ್ತಿ ಪಾಸ್ತಿ ಹಾಗೂ ಜಾನುವಾರು ರಕ್ಷಣೆಗಾಗಿ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ನದಿಯಲ್ಲಿ ಬಟ್ಟೆ ಒಗೆಯುವುದು, ಸ್ನಾನ ಮಾಡುವುದು, ಹಸು ತೊಳೆಯುವುದು, ಈಜುವುದು ಇನ್ನಿತರ ಚಟುವಟಿಕೆಗಳನ್ನು ಮಾಡಬಾರದು ಎಂದು ಈಗಾಗಲೇ ಜಿಲ್ಲಾಡಳಿತ ಸೂಚಿಸಿದೆ.
ನೆರೆ ಆತಂಕದಲ್ಲಿರುವ ಗ್ರಾಮಗಳಿಗೆ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀಧರ್ ಭೇಟಿ ನೀಡಿದರು. ನೀರಿನ ಮಟ್ಟ ಏರುತ್ತಿದ್ದರೂ ಗ್ರಾಮಸ್ಥರು ನದಿ ನೀರಿನಲ್ಲಿ ಬಟ್ಟೆ ತೊಳೆಯುವುದು, ನೀರನ್ನು ಸಂಗ್ರಹಿಸುವುದನ್ನು ಕಂಡು ಇಒಗೆ ಕರೆ ಮಾಡಿ ಕುಡಿಯುವ ನೀರು ಸೌಲಭ್ಯ ಕಲ್ಪಿಸುವಂತೆ ಸೂಚಿಸಿದರು.
ಇದನ್ನೂ ಓದಿ: ವಿಡಿಯೋ: ನೀರಿನ ರಭಸದ ನಡುವೆಯೂ ಬ್ರಿಡ್ಜ್ ಗೇಟ್ ತೆರೆಯುವ ಯತ್ನ
ದಾಸನಪುರ ಗ್ರಾಮದಲ್ಲಿ ಕಾವೇರಿ ನೀರು ಹರಿಯುತ್ತದೆ. ಆದರೆ, ನಮಗೆ ಸರಿಯಾಗಿ ಕುಡಿಯುವ ನೀರು ಪೂರೈಕೆ ಆಗುವುದಿಲ್ಲ. ಹೀಗಾಗಿ ನದಿಗೆ ಬಂದು ನೀರನ್ನು ಕೊಂಡೊಯ್ಯುತ್ತೇವೆ. ಪಾತ್ರೆ, ಬಟ್ಟೆಗಳನ್ನು ನದಿಗೆ ಬಂದು ತೊಳೆಯುತ್ತೇವೆ ಎಂದು ಗ್ರಾಮಸ್ಥರು ಸಮಸ್ಯೆ ಹೇಳಿಕೊಂಡರು. ಇದಕ್ಕೆ ಸ್ಪಂದಿಸಿದ ನ್ಯಾಯಾಧೀಶರು ಅಗತ್ಯ ಮೂಲಸೌಕರ್ಯ ಕೊಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಿದ್ದು, ನದಿ ಬಳಿ ಯಾರೂ ದೈನಂದಿನ ಕಾರ್ಯ ಮಾಡಬೇಡಿ ಎಂದು ತಿಳಿಸಿದರು.
ಭರಚುಕ್ಕಿಗೆ ನಿರ್ಬಂಧ: ಕಾವೇರಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಿರುವುದರಿಂದ ಜಿಲ್ಲಾಡಳಿತ ಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಜಲಪಾತ, ವೆಸ್ಲಿ ಸೇತುವೆ, ಶಿವನಸಮುದ್ರ ಸಮೂಹ ದೇವಾಲಯಗಳು, ದರ್ಗಾ ವೀಕ್ಷಣೆಗೆ ತಾತ್ಕಾಲಿಕ ನಿರ್ಬಂಧ ವಿಧಿಸಿದ್ದು, ಅಗತ್ಯ ಬ್ಯಾರಿಕೇಡ್ ಆಳವಡಿಸಿ ಭದ್ರತಾ ಸಿಬ್ಬಂದಿ ನಿಯೋಜಿಸಿರುವುದನ್ನು ಜಡ್ಜ್ ಪರಿಶೀಲಿಸಿದರು.