ಚಾಮರಾಜನಗರ : ಮಾತಿಗೆ ತಪ್ಪಿದವರು, ಕೃತಜ್ಞತೆ ಇಲ್ಲದವರು ಎಂದು ಸಿಎಂ ಬಿಎಸ್ವೈ ವಿರುದ್ಧ ಮಾತನಾಡುವ ನೈತಿಕತೆ ಹೆಚ್ ವಿಶ್ವನಾಥ್ ಅವರಿಗಿಲ್ಲ ಎಂದು ಜೆಡಿಎಸ್ ಶಾಸಕ ಸಾ ರಾ ಮಹೇಶ್ ತಿರುಗೇಟು ನೀಡಿದ್ದಾರೆ.
ಓದಿ: 7 ಮಂದಿ ನೂತನ ಸಚಿವರಿಂದ ಪ್ರಮಾಣ ವಚನ ಸ್ವೀಕಾರ
ಕಾಗದ ಪತ್ರ ಸಮಿತಿ ಸಭೆ ಬಳಿಕ ನಗರದಲ್ಲಿ ಮಾತನಾಡಿದ ಅವರು, ಹಳ್ಳಿಹಕ್ಕಿ ಹೆಚ್ ವಿಶ್ವನಾಥ್ ವಿರುದ್ಧ ತೀವ್ರ ಟೀಕಾಪ್ರಹಾರ ನಡೆಸಿದರು. ರಾಜಕೀಯವಾಗಿ ಮೂಲೆಗುಂಪಾಗಿದ್ದ ದುರಂತ ನಾಯಕನನ್ನು ಕರೆತಂದು ತನು-ಮನ-ಧನ ಕೊಟ್ಟು ಆಶ್ರಯ ನೀಡಿದ ಜೆಡಿಎಸ್ಗೆ ಅವರು ದ್ರೋಹ ಮಾಡಿದರು.
ಪಕ್ಷ ಬಿಟ್ಟ ಕೂಡಲೇ ಕಾರ್ಯಕರ್ತರ ವಿರುದ್ಧ, ನಾಯಕರ ವಿರುದ್ಧ ಸುಖಾಸುಮ್ಮನೇ ಮಾತನಾಡಿ ಚಾಮುಂಡೇಶ್ವರಿ ಶಾಪಕ್ಕೆ ತುತ್ತಾದರು ಎಂದರು. 'ಹಾಲು ನೀಡುವ ಎಮ್ಮೆ ಕೊಟ್ಟು, ಒದೆಯುವ ಕೋಣ ಕರೆತಂದಂತೆ' ಹೆಚ್ ವಿ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡೆವು. ಕಾಂಗ್ರೆಸ್‌ನವರು ಮದುವೆಯಾಗಿದ್ದರು, 40 ವರ್ಷ ಆದಮೇಲೆ ಡೈವೋರ್ಸ್ ಕೊಟ್ಟರು.
ಬೇಡ ಇದು ಸರಿಯಿಲ್ಲ ಎಂದು ಅವರು ಹೇಳಿದ್ದರು, ಇರಲಿ ನಾವು ನೋಡೋಣ ಎಂದು ಕೂಡಾವಳಿ ಮಾಡಿಕೊಂಡೆವು. ಬಿಜೆಪಿ ಅವರು ದಿನದ ಲೆಕ್ಕದಲ್ಲಿ ಕರೆದುಕೊಂಡು ಹೋದರು ಎಂದು ವ್ಯಂಗ್ಯವಾಡಿದರು.
ನನ್ನ ಉಸಿರು ಇರುವ ತನಕ ಅವರ ಹೆಸರು ಹೇಳಲ್ಲ, ಅದಕ್ಕೇ ಪರೋಕ್ಷವಾಗಿ ಅವರ ನಡೆ-ನುಡಿಯನ್ನು ಹೇಳಿದ್ದೇನೆ. ಈಗ ಚಾಮರಾಜನಗರ, ಮೈಸೂರು ಭಾಗದ ಜನರಿಗೆ ಗೊತ್ತಾಗಿದೆ ಅವರು ಕೋಗಿಲೆ ಅಲ್ಲ ಕಾಗೆ ಎಂದು ಲೇವಡಿ ಮಾಡಿದರು.