ಚಾಮರಾಜನಗರ: ಬಗೆಬಗೆಯ ಬಣ್ಣದ ಪೇಟಗಳನ್ನು ತೊಟ್ಟು ವಿವಿಧ ರಾಜ್ಯಗಳಿಗೆ ಭೇಟಿ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಕನ್ಫ್ಯೂಸ್ ಆಗಿದ್ದಾರೆ ಎಂದು ಮುಖ್ಯಮಂತ್ರಿ ಸಂಸದೀಯ ಕಾರ್ಯದರ್ಶಿ ಐವಾನ್ ಡಿಸೋಜಾ ವ್ಯಂಗವಾಡಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿ, ನೀಡಿದ ಯಾವುದೇ ಆಶ್ವಾಸನೆಗಳನ್ನು ಈಡೇರಿಸದೇ ಜನರನ್ನು ತಲುಪಲು ಮೋದಿ ಹೆಣಗುತ್ತಿದ್ದಾರೆ, ಬಿಜೆಪಿ ಬರೀ ಟೋಪಿ ಹಾಕುವ,ಸುಳ್ಳು ಹೇಳುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ಹೊರಹಾಕಿದರು.
15 ಲಕ್ಷ ಹಣ ಬಂದಿಲ್ಲ, ಭೇಟಿ ಪಡಾವೊ-ಭೇಟಿ ಬಚಾವೊ, ಜನ್-ಧನ್, ಮುದ್ರಾ ಯೋಜನೆ ಜನಸಾಮಾನ್ಯರನ್ನು ತಲುಪಿಲ್ಲ. ಯಾವುದೇ ಆಶ್ವಾಸನೆಯನ್ನು ಈಡೇರಿಸದೇ ಸೇನೆಯ ಕೆಲಸವನ್ನು ಸರ್ಕಾರ ಬಂಡವಾಳ ಮಾಡಿಕೊಂಡಿದ್ದು, ಇದರಿಂದ ಚುನಾವಣೆ ಗೆಲ್ಲುತ್ತೇವೆಂಬ ಭ್ರಮೆಯನ್ನು ಬಿಜೆಪಿ ಬಿಡಬೇಕು ಎಂದರು.
ಬಡತನ ನಿರ್ಮೂಲನೆಗಾಗಿ ವಾರ್ಷಿಕ 72 ಸಾವಿರ ರೂ. ಹಣ ನೀಡುವ ಯೋಜನೆಯನ್ನು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಈ ಕ್ರಾಂತಿಕಾರಕ ಯೋಜನೆಯನ್ನು ಮತದಾರರು ಒಪ್ಪಿದ್ದಾರೆ. ಕಾಂಗ್ರೆಸ್ ಕೊಟ್ಟ ಭರವಸೆಯನ್ನು ಈಡೇರಿಸುತ್ತಾರೆ, ಬಿಜೆಪಿಯವರು ಟೋಪಿ ಹಾಕುತ್ತಾರೆ ಎಂಬ ಭಾವನೆ ಜನರದ್ದಾಗಿದೆ ಎಂದು ತಿಳಿಸಿದರು.
ಭಾರತದ ಜನರನ್ನು ಮಾರಾಟಗಾರರು ಎಂದು ಕೊಂಡಿರುವ ಮೋದಿ ಸರ್ಕಾರಕ್ಕೆ ಈ ಬಾರಿ ಬೆಂಬಲವಿಲ್ಲ, ರಾಜ್ಯದಲ್ಲಿ 22 ಕ್ಕೂ ಹೆಚ್ಚು ಸ್ಥಾನಗಳನ್ನು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಸಂವಿಧಾನ ಬದಲಿಸುವುದು ಬಿಜೆಪಿಯ ಇನ್ನರ್ ಅಜೆಂಡಾ ಆಗಿದೆ. ಮಂಡ್ಯದಲ್ಲಿ ಬಿಜೆಪಿಗೆ ಕ್ಯಾಂಡಿಡೇಟ್ ಸಿಗಲಿಲ್ಲ ಆದ್ದರಿಂದ ಪಕ್ಷೇತರರ ಅಭ್ಯರ್ಥಿಗೆ ಬೆಂಬಲ ನೀಡಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.