ಚಾಮರಾಜನಗರ: ಕಾಡಿನಲ್ಲಿ ತನ್ನದೇ ಆದ ಸರಹದ್ದನ್ನು ಹೊಂದಿರುವ ಹುಲಿರಾಯ ಮನುಷ್ಯನನ್ನು ತಿಂದು ಜೀವಿಸುವ ನಿರ್ಣಯಕ್ಕೆ ಬರುವುದೇಕೆ, ವ್ಯಾಘ್ರನಿಗೆ ಮಾನವನೇ ಯಾವಾಗ ಟಾರ್ಗೆಟ್ ಆಗ್ತಾನೆ ಎಂಬ ಪ್ರಶ್ನೆಗಳಿಗೆ ಉತ್ತರಗಳು ಹೀಗಿವೆ.
ಹುಲಿ ಬಲಿಷ್ಠ ಪ್ರಾಣಿಯಾದರೂ ಮನುಷ್ಯರನ್ನು ಕಂಡರೆ ದಾಳಿ ಮಾಡುವ ಗೋಜಿಗೆ ಹೋಗುವುದಿಲ್ಲ. ಒಂದು ವೇಳೆ ದಾಳಿ ಮಾಡಲು ಬಂದಿದ್ದಾರೆ ಎಂದುಕೊಂಡು ಪ್ರತಿದಾಳಿ ನಡೆಸಿದಾಗಲೂ ತಿನ್ನದೇ ಕೇವಲ ಸಾಯಿಸಿ ಪರಾರಿಯಾಗುತ್ತದೆ. ದಾಳಿ ಮಾಡಿದ ಬಳಿಕ ತಿಂದರೆ ಮನುಷ್ಯರನ್ನು ತನ್ನದೇ ಬೇಟೆ ಎಂದು ಭಾವಿಸಲಿದೆಯಂತೆ.
ಗಾಯವಾಗಿರಬೇಕು, ಇಲ್ಲ ವಯಸ್ಸಾಗಿರಬೇಕು:
ಸಾಮಾನ್ಯವಾಗಿ ಹುಲಿ ಶಕ್ತಿ ಕಳೆದುಕೊಂಡಾಗ, ಗಾಯಗೊಂಡಾಗ, ವಯಸ್ಸಾಗಿ ಪ್ರಾಣಿಗಳನ್ನು ಹಿಡಿಯಲು ವಿಫಲವಾದಾಗ, ಸರಹದ್ದಿನ ಕದನದಲ್ಲಿ ಬೇರೊಂದು ಹುಲಿಯಿಂದ ಬೇರ್ಪಟ್ಟು ಆಹಾರ ಸಿಗದೇ ಇರುವ ಪರಿಸ್ಥಿತಿ ಎದುರಾದಾಗ ಮನುಷ್ಯ, ಕುರಿಯಂತ ಸಾಫ್ಟ್ ಟಾರ್ಗೆಟ್ಗಳನ್ನು ಬೇಟೆಯಾಡಲಿದೆ.
ಸಾಮಾನ್ಯವಾಗಿ ಹುಲಿ ತನ್ನ ಕಣ್ಣ ನೇರಕ್ಕಿರುವ ಪ್ರಾಣಿಗಳನ್ನೇ ಬಲಿ ಪಡೆಯಲಿದೆ. ತನಗಿಂತ ದೊಡ್ಡದಾದ - ಎತ್ತರವಾದ ಆಕಾರ ಹೊಂದಿರುವ ಮನುಷ್ಯನನ್ನು ತನಗಿಂತ ಬಲಿಷ್ಠ ಎಂದುಕೊಂಡಿರಲಿದೆ. ಒಂದು ವೇಳೆ ಮನುಷ್ಯನನ್ನು ಒಮ್ಮೆ ತಿಂದರೆ ಮಾನವ ತನಗಿಂತ ಬಲಿಷ್ಟನಲ್ಲ, ಆತನೂ ಕೂಡ ತನ್ನ ಬಲಿ ಎಂದು ಭಾವಿಸಿ ಬೇಟೆಯಾಡಲು ಪ್ರಾರಂಭಿಸುತ್ತದೆ.
ಬಹಿರ್ದೆಸೆ ವೇಳೆ, ಜಮೀನಿನಲ್ಲಿ ಕುಳಿತು ಕೆಲಸ ಮಾಡುವ ವೇಳೆ ಮನುಷ್ಯಾಕೃತಿ ಚಿಕ್ಕದಾಗಿ ಕಾಣುವುದರಿಂದ ಪ್ರಾಣಿಯೆಂದು ಭಾವಿಸಿ ಬೇಟೆಯಾಡುತ್ತದೆ. ಒಂದು ವೇಳೆ ಇದೇ ಮುಂದುವರಿದರೆ ನರಹಂತಕನಾಗಲಿದೆ ಎನ್ನುತ್ತಾರೆ ತಜ್ಞರು.
100 ಬೇಟೆಯಲ್ಲಿ ಶೇ.5 ಅಷ್ಟೇ ಯಶ:
- ರಾಜನಂತೆ ಗಾಂಭಿರ್ಯ, ಬೇಟೆಯಲ್ಲೂ ರಾಜಾರೋಷ ತೋರುವ ಹುಲಿರಾಯ ಸಮತೋಲನದ ಪರಿಸರದ ಸಂಕೇತವೂ ಆಗಿದ್ದಾನೆ.
- ಹುಲಿಯ ವೇಗ ಗಂಟೆಗೆ 60 - 65 ಕಿಮೀ. ಆದರೆ ಅದರ ಓಟ 35-45 ಮೀ. ಗೆ ಕೊನೆಗೊಳ್ಳಲಿದ್ದು, ಅಷ್ಟರಲ್ಲೇ ಬೇಟೆ ಸಿಕ್ಕರಷ್ಟೇ ಸರಿ ಇಲ್ಲವೆ ಬೇರೆ ಬೇಟೆಯನ್ನು ಹುಡುಕುತ್ತದೆ. ಚಿರತೆ ವರ್ತನೆ ಇದರ ವಿರುದ್ಧವಾಗಿರುತ್ತದೆ ಏಕೆಂದರೆ 1 ಕಿಮೀ ತನಕವೂ ಬೇಟೆಯನ್ನು ಅಟ್ಟಾಡಿಸಲಿದೆ.
- ಹುಲಿ 100 ಬೇಟೆಗಳಲ್ಲಿ ಸರಾಸರಿ ಅದು ಯಶಸ್ಸು ಕಾಣುವುದು ಕೇವಲ 5-7 ಮಾತ್ರ. ಹೊಂಚುಹಾಕಿ ಹುಲಿ ಬೇಟೆಯಾಡುವುದಿಲ್ಲ.
- ಕಾಡೆಮ್ಮೆ, ಜಿಂಕೆ, ಮರಿ ಆನೆಗಳನ್ನು ಹೆಚ್ಚು ಬೇಟೆಯಾಡಲಿವೆ. ಗಂಡು ಹುಲಿಗಳು ಕೆಲವೊಮ್ಮೆ ಹುಲಿ ಮರಿಗಳನ್ನೇ ತಿನ್ನುತ್ತವೆ.
- ಹುಲಿ ಒಂದು ವೇಳೆ ಜಿಂಕೆಗಳನ್ನೇ ತಿಂದರೆ ವರ್ಷಕ್ಕೆ ಸರಾಸರಿ 130-150 ಜಿಂಕೆಗಳು ಬೇಕಾಗಬಹುದು. ಸಾಯಿಸಿದ ಪ್ರಾಣಿಯನ್ನು 300 ಮೀ.ಕ್ಕಿಂತಲೂ ಹೆಚ್ಚಿನ ದೂರ ಎಳೆದೊಯ್ದು ಆಹಾರವನ್ನು ಸುರಕ್ಷಿತ ಮಾಡಿಕೊಳ್ಳಲಿದೆ. 2 - 3 ದಿನ ಅದೇ ಬೇಟೆಯನ್ನು ತಿನ್ನಲಿದ್ದು ಪ್ರತಿದಿನ ಬೇಟೆಯಾಡುವುದಿಲ್ಲ.
- ಕಾಡುನಾಯಿಗಳು, ಕಾಡೆಮ್ಮೆಗಳ ಗುಂಪು ಹುಲಿಯನ್ನು ಓಡಿಸುವ ಸಾಮರ್ಥ್ಯ ಹೊಂದಿರುತ್ತವೆ .
- ಹುಲಿ ಓಡುವಾಗ ಉಗುರುಗಳು ಒಳಕ್ಕಿರಲಿದ್ದು, ಅದು ದಾಳಿ ಮಾಡುವಾಗ ಮಾತ್ರ ಉಗುರುಗಳು ಹೊರಬರಲಿದೆ.
- ಹುಲಿ ಮೈಮೇಲಿನ ಪಟ್ಟೆಗಳು ಮನುಷ್ಯನ ಬೆರಳಚ್ಚಿನಂತೆ ಒಂದೊಂದು ಹುಲಿಯ ಮೈ ಮೇಲಿನ ಪಟ್ಟೆಗಳು ಬೇರೆ ಬೇರೆಯಾಗಿರುತ್ತದೆ.
- ಹುಲಿಯ ಪಂಜಿನ ಹೊಡೆತ ಪ್ರಾಣಿ ಅಥವಾ ಮನುಷ್ಯನ ಮೇಲೆ 150 ಪೌಂಡಗ್ನಷ್ಟು ಒತ್ತಡವನ್ನು ಸೃಷ್ಟಿಸಲಿದೆ. ಮನುಷ್ಯನಿಗೆ ಹೊಡೆದರೆ ಒಂದೇ ಹೊಡೆತಕ್ಕೆ ಬೆನ್ನುಮೂಳೆ ಮುರಿಯಬಹುದಾಗಿದೆ. ಇಲ್ಲವೆ ತಲೆಯೇ ಕೆಳಕ್ಕೆ ಬೀಳ ಬಹುದಾಗಿದೆ.
- ಮ್ಯಾಂಗ್ರೋವ್ ಕಾಡಿನ ಹುಲಿಗಳು ಮನುಷ್ಯನನ್ನೇ ತಿನ್ನುವ ಪ್ರವೃತ್ತಿ ಬೆಳೆಸಿಕೊಂಡಿವೆ. ಆದರೆ ಬಹಳಷ್ಟು ಹುಲಿಗಳು ನರಹಂತಕವಲ್ಲ.
- ತಾಯಿಯಿಂದ ಬೇರ್ಪಟ್ಟ ಹುಲಿಗಳು ತನ್ನ ಸರಹದ್ದನ್ನು ನಿರ್ಮಿಸಿಕೊಳ್ಳುವಾಗ ಮನುಷ್ಯನ ಮೇಲೆ ದಾಳಿ ಮಾಡುವ ಸಾಧ್ಯತೆ ಇರಲಿದೆ. ಬೇಟೆಯಾಡುವ ಶಕ್ತಿ ಕಳೆದುಕೊಂಡ, ವಯಸ್ಸಾದ, ಗಾಯಗೊಂಡ ಹುಲಿಗಳು ಮನುಷ್ಯನ ಮೇಲೆ ದಾಳಿ ಮಾಡಲಿದೆಯೇ ಹೊರತು ಇನ್ನುಳಿದ ಪ್ರಕರಣಗಳಲ್ಲಿ ಭಯದಿಂದ ಮನುಷ್ಯನ ಮೇಲೆ ಎರಗುತ್ತವೆ.
- ನೆಲ ಕೆರೆಯುವುದು, ಮರಗಳ ಮೇಲೆ ಗೀಚುವುದು, ಮಲ-ಮೂತ್ರ ವಿಸರ್ಜನೆ ಮೂಲಕ ತನ್ನ ಸರಹದ್ದನ್ನು ನಿರ್ಮಿಸಿಕೊಳ್ಳಲಿದೆ. ಒಂದು ಹುಲಿಗೆ ಅಂದಾಜು 60 ಚದರ ಕಿಮೀ ನಷ್ಟು ವಿಸ್ತಾರ ಪ್ರದೇಶ ಅಗತ್ಯವಾಗಿರುತ್ತದೆ
- ಹುಲಿಯನ್ನು ಸರಹದ್ದಿನ ಗುರುತುಗಳನ್ನು ಕಂಡು ಹೆಣ್ಣು ಹುಲಿಗಳು ಸಂತಾನೋತ್ಪತ್ತಿಗೆ ಬರಲಿದೆ. ಒಂದು ಗಂಡು ಹುಲಿಯ ಸರಹದ್ದಿನ ನಡುವೆ ಎರಡು ಹೆಣ್ಣು ಹುಲಿಗಳ ಸರಹದ್ದಿರುವುದು ಸಾಮಾನ್ಯ. ಗಂಡು ಹುಲಿಗಳ ಸಂಖ್ಯೆಯೇ ಹೆಚ್ಚಿದ್ದರೆ ಕಾಳಗ ಏರ್ಪಟ್ಟು ಗೆದ್ದ ಹುಲಿ ಅಧಿಪತ್ಯ ಸಾಧಿಸುತ್ತದೆ.
- ಹೆಣ್ಣು ಹುಲಿಯನ್ನು ಇನ್ನೂ ತನ್ನ ಜೊತೆಗೆ ಇಟ್ಟುಕೊಳ್ಳುವ ವಾಂಛೆ ಮೂಡಿದ್ದರೆ ಮರಿಗಳನ್ನು ಗಂಡು ಹುಲಿ ತಿಂದು ಹಾಕುತ್ತದೆ.
- ಎರಡು ಹೆಣ್ಣು ಹುಲಿಗಳ ನಡುವೆ ಕಾಳಗ, ಹೆಣ್ಣು ಹುಲಿಯೊಂದಿಗೆ ಗಂಡು ಹುಲಿಯ ಕಾದಾಟ ತೀರಾ ಅಪರೂಪ.
ವ್ಯಾಘ್ರ ಸುಭಿಕ್ಷತೆ ಉತ್ತಮ ಪರಿಸರದ ಸಂಕೇತವಾಗಿದ್ದು, ಹುಲಿಯನ್ನು ಉಳಿಸಬೇಕಾಗಿರುವುದು ಮುಂದಿನ ಪೀಳಿಗೆ ನೋಡಿಲಿಕ್ಕಷ್ಟೇ ಅಲ್ಲದೇ ಇಂದಿನ ಜನರು ಉತ್ತಮ ಪರಿಸರದಲ್ಲಿ ಬದುಕಲು ಕೂಡ ಅದು ಬೇಕು ಎಂಬುದು ಕೂಡ ಸತ್ಯ.