ಚಾಮರಾಜನಗರ : ಲಾಟರಿ ಹೊಡೆದಂತೆ ಮುಖ್ಯಮಂತ್ರಿಯಾದ ಸಿದ್ದರಾಮಯ್ಯಗೆ ಧಮ್ ಎಂದು ಹೇಳುವುದಕ್ಕೆ ಯೋಗ್ಯತೆಯಿಲ್ಲ ಎಂದು ಸಚಿವ ಈಶ್ವರಪ್ಪ ವಾಗ್ದಾಳಿ ನಡೆಸಿದರು.
ಟಿಕೇಟ್ ತಪ್ಪಲು ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಕಾರಣ ಎಂಬ ಹೆಚ್ ವಿಶ್ವನಾಥ್ ಆರೋಪವನ್ನು ಪರೋಕ್ಷವಾಗಿ ಒಪ್ಪಿಕೊಂಡಂತೆ ಮಾತನಾಡಿದ ಅವರು, ಸಿದ್ದರಾಮಯ್ಯ ಮೊದಲಿನಿಂದಲೂ ಎಲ್ಲರನ್ನೂ ತುಳಿಯುತ್ತಲೇ ಬರುತ್ತಿದ್ದಾರೆ. ಸ್ವಾರ್ಥಕ್ಕೆ ಎಲ್ಲರನ್ನೂ ಬಲಿ ಪಡೆಯಲು ಯಶಸ್ವಿಯಾದರು. ಅವರೆಷ್ಟು ಕುತಂತ್ರಿ ಎಂದು ಹೆಚ್ ವಿಶ್ವನಾಥ್ ಅವರಿಗೆ ಚೆನ್ನಾಗಿ ತಿಳಿದಿದೆ ಎಂದರು.
ಇದೇ ವೇಳೆ ಸಾಹಿತಿ ಕೋಟಾದಲ್ಲಿ ನಾಮನಿರ್ದೇಶನ ಸದಸ್ಯತ್ವ ಸಿಗಲಿದೆ ಎಂಬ ಅವರ ಅಪೇಕ್ಷೆ ಈಡೇರಲಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಜಾತಿಯನ್ನು ಬಹಳ ಉದ್ಧಾರ ಮಾಡುತ್ತೇನೆ ಎನ್ನುತ್ತಾರೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಎಷ್ಟು ಮಂದಿ ಕುರುಬರಿಗೆ ಅವರು ಟಿಕೇಟ್ ಕೊಡಿಸಿದರು. ರಾಜ್ಯಸಭೆಗೆ ಎಷ್ಟು ಮಂದಿ ಕುರುಬರನ್ನು ಕಳುಹಿಸಿದ್ದಾರೆ ಎಂದು ಪ್ರಶ್ನಿಸಿದ್ರು. ಬಿಜೆಪಿ ಕಾರ್ಯಕರ್ತರ ಪಕ್ಷ, ನಾವು ಜಾತಿಯನ್ನು ಬಳಸಿಕೊಳ್ಳುವುದಿಲ್ಲ. ಆದರೆ, ಜಾತಿ ಲಾಭ ಪಡೆಯುವುದರಲ್ಲಿ ಸಿದ್ದರಾಮಯ್ಯ ಎಕ್ಸ್ಪರ್ಟ್ ಎಂದು ಕುಟುಕಿದರು. ವಿಶ್ವನಾಥ್ ಬೆನ್ನಿಗೆ ಚೂರಿ ಹಾಕಿದರು ಎಂದು ಹೇಳಿರುವ ಕೃಷ್ಣ ಬೈರೇಗೌಡ ಸಚಿವರಾಗಿದ್ದವರು, ನಾಲಿಗೆ ಬಿಗಿ ಹಿಡಿದು ಮಾತನಾಡುವುದನ್ನು ಕಲಿಯಲಿ ಎಂದು ಕಿಡಿಕಾರಿದರು.