ಚಾಮರಾಜನಗರ: ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ಚರ್ಚೆ, ಪಕ್ಷಾಂತರದ ಮಾತುಕತೆ ತಾರಕಕ್ಕೇರಿದ್ದು, ಪೊಲೀಸ್ ಅಧಿಕಾರಿಯೊಬ್ಬರು ಎಂಎಲ್ಎ ಆಗಲು ಈಗಾಗಲೇ ವಿಧಾನಸೌಧಕ್ಕೆ ಏಣಿ ಹಾಕಿದ್ದಾರೆಂಬ ಮಾತುಗಳು ಆರಂಭವಾಗಿವೆ.
ಚಾಮರಾಜನಗರ ಗ್ರಾಮಾಂತರ ಠಾಣೆ ಸಿಪಿಐ ಆಗಿರುವ ಬಿ. ಪುಟ್ಟಸ್ವಾಮಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಸಾಕಷ್ಟು ತಯಾರಿ ನಡೆಸುತ್ತಿದ್ದು, ಈ ಬಾರಿಯ ಚುನಾವಣೆ ಅಖಾಡಕ್ಕೆ ಧುಮುಕುತ್ತಾರೆ ಎಂಬ ಮಾತುಗಳು ಕೇಳಿಬಂದಿವೆ.
ಟಿಕೆಟ್ ಸಿಕ್ಕರೆ ಬಿಜೆಪಿಯಿಂದ ಇಲ್ಲವೇ, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಪುಟ್ಟಸ್ವಾಮಿ ತಯಾರಿ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ. ಈಗಾಗಲೇ ಪೊಲೀಸ್ ಇಲಾಖೆಯಿಂದ ಒಂದು ಹೆಜ್ಜೆ ಆಚೆಯಿಟ್ಟಿದ್ದು, ಮೇ ತಿಂಗಳಿನಲ್ಲಿ ರಾಜಕೀಯ ರಣರಂಗಕ್ಕೆ ಇಳಿಯಲಿದ್ದಾರೆ. ಈ ಸಂಬಂಧ ದೆಹಲಿ ಮಟ್ಟದಲ್ಲಿ ಚರ್ಚೆ ಸಹ ನಡೆದಿದೆ ಎಂದು ಕೆಲ ಮೂಲಗಳು 'ಈಟಿವಿ ಭಾರತ'ಕ್ಕೆ ತಿಳಿಸಿವೆ.
ಇದನ್ನೂ ಓದಿ: ನೊಂದವರು, ದೀನ-ದಲಿತರ ಸೇವೆಯೇ ನಿಜವಾದ ಭಗವಂತನ ಆರಾಧನೆ : ಮಂತ್ರಾಲಯ ಶ್ರೀ
ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ವಿವಿಧ ಸಮುದಾಯ ಮುಖಂಡರನ್ನು ಪೊಲೀಸ್ ಅಧಿಕಾರಿ ಪುಟ್ಟಸ್ವಾಮಿ ಆಪ್ತರು ಸಂಪರ್ಕಿಸುತ್ತಿದ್ದು, ಕಳೆದ ಒಂದೂವರೆ ವರ್ಷಗಳಿಂದ ವಿವಿಧ ಸೇವಾ ಕಾರ್ಯದಲ್ಲೂ ಅವರು ತೊಡಗಿಸಿಕೊಂಡಿದ್ದಾರೆ. ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ತುಂಬಿ ತುಳುಕುತಿದ್ದಾರೆ. ಈಗ ಆ ಪಟ್ಟಿಗೆ ಪೊಲೀಸ್ ಅಧಿಕಾರಿ ಪುಟ್ಟಸ್ವಾಮಿ ಸೇರ್ಪಡೆಯಾಗಿದ್ದಾರೆ.
ಸಿಪಿಐ ಪುಟ್ಟಸ್ವಾಮಿ ಅವರ ಕೆಲ ಬೆಂಬಲಿಗರು ಮಾತನಾಡಿ, ಮೇ ತಿಂಗಳೊಳಗೆ ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟು ಬಳಿಕ ಜನಸೇವೆಗೆ ಬಂದೇ ಬರುತ್ತಾರೆಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.