ಚಾಮರಾಜನಗರ: ಇಂದು ವಿಶ್ವ ಆನೆ ದಿನ. ಭೂಮಿ ಮೇಲಿನ ದೊಡ್ಡ ಪ್ರಾಣಿ, ಸೂಕ್ಷ ಸಂವೇದನಾಶೀಲ, ಅಗಾಧ ನೆನಪಿನ ಶಕ್ತಿ ಇರುವ ಆನೆ ಬಗೆಗೊಂದಿಷ್ಟು ಉಪಯುಕ್ತ ಮತ್ತು ಕುತೂಹಲಕಾರಿ ಅಂಶಗಳು ಇಲ್ಲಿವೆ ನೋಡಿ.
- ದೈತ್ಯಾಕಾರ ಹೊಂದಿರುವ ಆನೆ ಬಹಳ ಸೂಕ್ಷ್ಮ, ಸಂವೇದನೆಯ ಜೀವಿ ಜೊತೆಗೆ ಬುದ್ಧಿವಂತ ಪ್ರಾಣಿ ಕೂಡ.
- ಆನೆಗಳಲ್ಲೀಗ ಎರಡು ಪ್ರಭೇದವಿದ್ದು, ಒಂದು ಆಫ್ರಿಕಾದ ಆನೆಗಳು ಮತ್ತೊಂದು ಏಷ್ಯಾದ ಆನೆಗಳು.ಆನೆ ಬಗ್ಗೆ ಕುತೂಹಲಕಾರಿ ಮಾಹಿತಿ ಬಿಚ್ಚಿಟ್ಟ ಅಧಿಕಾರಿಗಳು
- ಆಫ್ರಿಕಾದ ಆನೆಗಳ ಜೀವಿತಾವಧಿ 60-70 ವರ್ಷ, ಏಷ್ಯಾ ಆನೆಗಳ ಜೀವಿತಾವಧಿ 45-55 ವರ್ಷ. ಆಫ್ರಿಕಾದ ಆನೆಗಳು 9 ಸಾವಿರ ಕೆಜಿ ತನಕವೂ ದೇಹದ ತೂಕ ಹೊಂದಿರಲಿದ್ದು, ಏಷ್ಯಾದ ಆನೆಗಳ ಸರಾಸರಿ ತೂಕ 5500 ಕೆಜಿ.ಆನೆ ಮತ್ತು ಆನೆ ಮರಿ
- ಆನೆಯ ವಿಶಿಷ್ಟವಾದ ಅಂಗ ಅದರ ಸೊಂಡಿಲು. ಇದು 120-140 ಕೆಜಿ ತೂಗಲಿದ್ದು, 250 ಕೆಜಿವರೆಗೂ ಭಾರ ಎತ್ತುವ ಶಕ್ತಿ ಈ ಸೊಂಡಿಲಿಗಿದೆ. ಅದೇ ರೀತಿ ಒಂದೇ ಒಂದು ಹುಲ್ಲಿನ ಎಸಳನ್ನು ತೆಗೆದುಕೊಳ್ಳಬಲ್ಲುದು.
- ಆನೆ ಹೊಂದಿರುವ ದೊಡ್ಡ ದೊಡ್ಡ ಕಿವಿಗಳ ಮೂಲಕ ತನ್ನ ದೇಹದ ಉಷ್ಣತೆ ಹೆಚ್ಚಾಗದಂತೆ ಕಾಪಾಡಿಕೊಳ್ಳುತ್ತದೆ ಎಂಬುದು ಅಚ್ಚರಿಯಾದರೂ ಸತ್ಯ.ಆಟವಾಡುತ್ತಿರುವ ಮರಿ ಆನೆ
- ಆನೆ ಗಂಟೆಗೆ 40 ಕಿ.ಮೀ. ವೇಗದಲ್ಲಿ ಓಡಬಲ್ಲದು. ಮತ್ತೊಂದು ಆನೆಯ ಘೀಳಿನ ಶಬ್ದವನ್ನು ಇನ್ನೊಂದು ಆನೆ 10 ಕಿ.ಮೀ. ದೂರದಲ್ಲಿದ್ದರೂ ಗ್ರಹಿಸಬಲ್ಲದು.
- ಆನೆಗೆ ಆಗಾಧವಾದ ನೆನಪಿನ ಶಕ್ತಿಯಿದ್ದು, ತಾಯಿಯಾನೆ ಮರಿಗೆ ವರ್ಗಾಯಿಸುತ್ತದೆ. ಯಾವ ಕಾಲದಲ್ಲಿ ಎಲ್ಲಿ ನೀರು ಸಿಗಲಿದೆ, ಆಹಾರ ಎಲ್ಲಿ ಸಿಗಲಿದೆ ಎಂಬುದು ಇಂದಿನ ಜಿಪಿಎಸ್ಗಿಂತಲೂ ಪರಿಣಾಮಕಾರಿಯಾಗಿದೆ.ತಾಯಿ ಆನೆ ಮಮತೆಯಲ್ಲಿ ಆನೆ ಮರಿ
- ಆನೆಯ ಹಿಂಡಿನ ನೇತೃತ್ವ ವಹಿಸುವುದು ತಂಡದ ವಯಸ್ಸಾದ ಹೆಣ್ಣಾನೆಯಾಗಿರಲಿದೆ. ಆನೆಯ ಗರ್ಭಾವಧಿ 20-24 ತಿಂಗಳಾಗಿದ್ದು, ಎರಡು ವರ್ಷ ಹಾಲು ಕುಡಿಸುತ್ತವೆ. ಮರಿ 5 ವರ್ಷ ಆಗುವ ತನಕವೂ ಪಾಲನೆ ಮಾಡುತ್ತವೆ.
- ಗಂಡಾನೆ ಪ್ರೌಢಾವಸ್ಥೆಗೆ ಬಂದ ಕೂಡಲೇ ಗುಂಪಿನಿಂದ ಹೊರ ಹಾಕುವ ಪದ್ಧತಿ ಆನೆಯಲ್ಲಿದೆ. ಗಂಡಾನೆ ಬೇರೆ ಆನೆಗಳೊಂದಿಗೆ ಸಂಪರ್ಕಕ್ಕೆ ಬಂದು ವಂಶ ಬೆಳೆಸಲ್ಲೆನ್ನುವ ಉದ್ದೇಶ ಇದರದ್ದು. ಒಂದು ವೇಳೆ ತನ್ನ ಸಂಬಂಧಿ ಆನೆಗಳು ಎದುರಾದರೆ ಉಭಯ ಕುಶಲೋಪರಿ ವಿಚಾರಿಸುವ ವಿಚಾರದಲ್ಲಿ ಮಾನವನನ್ನು ಹೋಲುತ್ತವೆ.
- ಆನೆ ದಿನಕ್ಕೆ 3-4 ತಾಸಷ್ಟೇ ನಿದ್ರಿಸಲಿದ್ದು, ಉಳಿದ ವೇಳೆ ತಿನ್ನುತ್ತಾ ಇಲ್ಲಾ ಆಹಾರ ಹುಡುಕುತ್ತಾ ಇರುತ್ತದೆ. ನಿಂತು ಮತ್ತು ಮಲಗಿ ಆನೆ ನಿದ್ರಿಸುವುದು ಮತ್ತೊಂದು ವೈಶಿಷ್ಟ್ಯ.ಗಜರಾಜ
- ಒಂದು ಆನೆ ದಿನಕ್ಕೆ ಏನಿಲ್ಲವೆಂದರೂ 270-300 kg ಮೇವು ತಿನ್ನುತ್ತವೆ. 75-150 ಲೀಟರ್ ನೀರು ಕುಡಿಯುತ್ತದೆ.
- ಮರಿ ಆನೆಗಳು ಪ್ರತಿದಿನ ಎರಡು ವರ್ಷದ ತನಕ 10-12 ಲೀಟರ್ ತಾಯಿ ಎದೆಹಾಲನ್ನು ಕುಡಿಯುತ್ತವೆ.
- ಆನೆ ಬಗೆಗಿನ ಅಧ್ಯಯನ ನಡೆಸಿರುವ ಜಾಯ್ಸ್ ಪೂಲೆ ಪ್ರಕಾರ ಆನೆಯು 70 ರೀತಿಯ ಶಬ್ದ ಮಾಡಲಿದ್ದು, 160 ರೀತಿಯ ಚಿಹ್ನೆಗಳ ಮೂಲಕ ಸಂವಹನ ನಡೆಸುತ್ತವೆ.
- ತಮ್ಮ ಗುಂಪಿನಲ್ಲಿ ಯಾವುದಾದರೂ ಒಂದು ಆನೆ ಸತ್ತರೆ ಸೊಂಡಿಲ ಮೂಲಕ ಅವುಗಳನ್ನು ಸ್ಪರ್ಶಿಸಿ ಶ್ರದ್ಧಾಂಜಲಿ ಕೋರುವುದು ಆನೆಯ ಒಂದು ವಿಶಿಷ್ಟ ವರ್ತನೆ.ಕಾಡಿನಲ್ಲಿ ವಿಹರಿಸುತ್ತಿರುವ ಆನೆಗಳು
- ಆನೆ ಗಣತಿಯನ್ನು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಮಾಡಲಿದ್ದು, ಆನೆಯ ಲದ್ದಿ, ಆನೆಯ ಗುಂಪುಗಳ ಆಧಾರದ ಮೇಲೆ ಆನೆಗಳ ಸಂಖ್ಯೆಯನ್ನು ಲೆಕ್ಕ ಹಾಕಲಾಗುತ್ತದೆ.
- ಕರ್ನಾಟಕದಲ್ಲಿ ಅತಿ ಹೆಚ್ಚು ಆನೆಗಳಿರುವುದು ಮೈಸೂರು ಭಾಗದಲ್ಲಿ.
- ಆನೆ ಬಗೆಗೆ ಪುರಾಣಗಳಲ್ಲೂ ಉಲ್ಲೇಖ. ಗಜಮುಖನಾಗಿರುವ ಗಣಪತಿ ಹಿಂದೂ ಧರ್ಮದ ಆರಾಧ್ಯ ದೈವ.
- ಯುದ್ಧಗಳಿಗೆ ಬಳಕೆ, ಭಾರದ ವಸ್ತುಗಳ ರವಾನೆಗೂ ಆನೆಯ ಸಹಾಯ, ದೇಗುಲ, ವಿಶ್ವವಿಖ್ಯಾತ ದಸರಾದಲ್ಲಿ ಆನೆ ಅವಶ್ಯ.ತಾಯಿ ಆನೆ ಮಮತೆಯಲ್ಲಿ ಆನೆ ಮರಿ
- ಮಾಹಿತಿ: ಏಡುಕುಂಡಲು- ಮಹದೇಶ್ವರ ವನ್ಯಜೀವಿಧಾಮ ಡಿಎಫ್ಒ, ಕಾಂತರಾಜು ಪುಣಜನೂರು ಆರ್ಎಫ್ಒ, ಚಿರಾಗ್ ವನ್ಯಜೀವಿ ತಜ್ಞ
- ಫೋಟೋಗಳು: ವೇಣುಗೋಪಾಲ್ ಮತ್ತು ಅಂಜನಾ ಸುಜಯಕಾಂತ್