ಚಾಮರಾಜನಗರ: ಬಡವರು, ನಿರ್ಗತಿಕರಿಗೆ ವರದಾನವಾಗಿದ್ದ ಇಂದಿರಾ ಕ್ಯಾಂಟೀನ್ ಲಾಕ್ಡೌನ್ ವೇಳೆಯಲ್ಲೂ ಸಾರ್ಥಕ ರೀತಿಯಲ್ಲಿ ಕಾರ್ಯ ನಿರ್ವಹಿಸಿದೆ.
ಮಾ. 23ರಿಂದ ಏ.21ರ ವರೆಗೆ ಚಾಮರಾಜನಗರ, ಗುಂಡ್ಲುಪೇಟೆ, ಯಳಂದೂರು ಹಾಗೂ ಕೊಳ್ಳೇಗಾಲ ಒಳಗೊಂಡಂತೆ ಬರೋಬ್ಬರಿ 1.40 ಲಕ್ಷ ಊಟ ವಿತರಿಸಲಾಗಿದ್ದು, ರೋಗಿಗಳ ಸಂಬಂಧಿಕರು, ಸರ್ಕಾರಿ ನೌಕರರು ಇದರ ಫಲಾನುಭವಿಗಳಾಗಿದ್ದಾರೆ. ಪ್ರತಿ ತಿಂಗಳಿಗೆ 1.35 ಲಕ್ಷ ಊಟ ನೀಡಲು ಇಂದಿರಾ ಕ್ಯಾಂಟೀನ್ಗೆ ಅವಕಾಶವಿದ್ದರೂ ಲಾಕ್ಡೌನ್ ಇಲ್ಲದ ವೇಳೆ 2-3 ಸಾವಿರ ಊಟ ಕಡಿಮೆಯೇ ವಿತರಣೆಯಾಗುತ್ತಿತ್ತು.
ಆದರೆ, ಲಾಕ್ಡೌನ್ನಲ್ಲಿ ಎಲ್ಲಾ ಹೋಟೆಲ್, ಫಾಸ್ಟ್ ಪುಡ್ ಬಂದ್ ಆಗಿದ್ದರೂ ಹಸಿದವರಿಗೆ ಇಂದಿರಾ ಕ್ಯಾಂಟೀನ್ ಒಂದೇ ಆಧಾರವಾಗಿ 1.40 ಸಾವಿರ ಊಟ ಖರ್ಚಾಗಿದೆ. ಇದರಲ್ಲಿ 6 ಸಾವಿರ ಊಟ ಉಚಿತವಾಗಿ ನಿರ್ಗತಿಕರಿಗೆ ವಿತರಿಸಲಾಗಿದೆ. ಲಾಕ್ಡೌನ್ ವೇಳೆ ಕ್ಯಾಂಟೀನ್ಗೆ ಬಂದವರಿಗೆ ಯಾರೂ ಹಸಿವಿನಿಂದ ಹಿಂತಿರುಗದಂತೆ ನೋಡಿಕೊಳ್ಳಲಾಗಿದೆ. ಬಡವರು, ಕೂಲಿ ಕಾರ್ಮಿಕರು ಸೇರಿದಂತೆ ಸರ್ಕಾರಿ ನೌಕರರಿಗೂ ಇಂದಿರಾ ಕ್ಯಾಂಟೀನ್ ಹಸಿವು ನೀಗಿಸಿದೆ ಎಂದು ನಗರಾಭಿವೃದ್ಧಿ ನಿರ್ದೇಶಕ ಕೆ.ಸುರೇಶ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಇನ್ನು, ಲಾಕ್ಡೌನ್ನಲ್ಲಿ ವಿಶೇಷವಾಗಿ ಬಾಕ್ಸ್ಗಳನ್ನು ತಂದರೆ ಪಾರ್ಸೆಲ್ ವ್ಯವಸ್ಥೆಯನ್ನು ಕಲ್ಪಿಸಿದ್ದೆವು. ಈ ಮೂಲಕ ಆಸ್ಪತ್ರೆಯಲ್ಲಿದ್ದ ರೋಗಿಗಳ ಸಂಬಂಧಿಕರು, ಕೂಲಿ ಕಾರ್ಮಿಕರು ಇದರ ಲಾಭ ಪಡೆದರು ಎಂದು ಕ್ಯಾಂಟೀನ್ ಕ್ಯಾಷಿಯರ್ ನಿಸಾರ್ ಅಹಮದ್ ಮಾಹಿತಿ ನೀಡಿದರು.
ಲಾಕ್ಡೌನ್ ಅವಧಿಯಲ್ಲಿ ಗುಂಡ್ಲುಪೇಟೆ ಕ್ಯಾಂಟೀನ್ನಲ್ಲಿ 23,110 ಊಟ, ಯಳಂದೂರಿನಲ್ಲಿ 20,696, ಕೊಳ್ಳೇಗಾಲದಲ್ಲಿ 49,482 , ಚಾಮರಾಜನಗರದಲ್ಲಿ 44,646 ಊಟ ವಿತರಿಸಿದ್ದು ಇದರೊಟ್ಟಿಗೆ ಸಿಡಿಎಸ್ ಭವನದಲ್ಲಿನ ನಿರ್ಗತಿಕರು, ರಾಜಸ್ಥಾನದ ವಲಸಿಗ ಕಾರ್ಮಿಕರಿಗೆ 6 ಸಾವಿರ ಊಟ ನೀಡುವ ಮೂಲಕ ಉತ್ತಮ ಕಾರ್ಯ ಮಾಡಿದ್ದಾರೆ.
ಇನ್ನು, ಇಂದಿರಾ ಕ್ಯಾಂಟೀನ್ ನೀಡಿದ ರುಚಿ - ಶುಚಿ ಆಹಾರಕ್ಕೂ ಗ್ರಾಹಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಲಾಕ್ಡೌನ್ನಲ್ಲಿ ಕ್ಯಾಂಟೀನ್ ಊಟ ಸವಿದ ಬಳಿಕ ಲಾಕ್ಡೌನ್ ಸಡಿಲಿಕೆ ಬಳಿಕವೂ ಖಾಯಂ ಗ್ರಾಹಕರಾಗುತ್ತಿದ್ದಾರೆ.