ಚಾಮರಾಜನಗರ: ಕೊರೊನಾ ಮಹಾಮಾರಿ ಹೊಡೆತ ಇಂದಿರಾ ಕ್ಯಾಂಟೀನ್ಗೂ ತಟ್ಟಿದ್ದು ಇದೇ ಮೊದಲ ಬಾರಿಗೆ ಪಾರ್ಸೆಲ್ ವ್ಯವಸ್ಥೆ ಮೂಲಕ ಜನರಿಗೆ ಆಹಾರ ವಿತರಿಸುವ ನಿಯಮ ಜಾರಿಗೊಳಿಸಲಾಗಿದೆ.
ಏ.22ರಂದು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಆದಷ್ಟು ಪಾರ್ಸೆಲ್ ವ್ಯವಸ್ಥೆ ಮೂಲಕ ಆಹಾರ ವಿತರಿಸುವಂತೆ ಪೌರಾಡಳಿತ ನಿರ್ದೇಶನಾಲಯ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ, ಚಾಮರಾಜನಗರ ಜಿಲ್ಲೆಯ ನಾಲ್ಕು ಇಂದಿರಾ ಕ್ಯಾಂಟಿನ್ಗಳಲ್ಲಿ ಪಾರ್ಸೆಲ್ ಮಾಡಲು ಸಹಾಯಕವಾದ ಉಪಹಾರ ತಯಾರಿಸಿ ವಿತರಿಸಲಾಗುತ್ತಿದೆ.
ಹಾಸ್ಟೆಲ್ ವಿದ್ಯಾರ್ಥಿಗಳು, ಸರ್ಕಾರಿ ನೌಕರರು ಸೇರಿದಂತೆ ಕಟ್ಟಡ ಕಾರ್ಮಿಕರು ಹೆಚ್ಚು ಮಂದಿ ಈಗ ಇಂದಿರಾ ಕ್ಯಾಂಟೀನನ್ನೇ ಆಶ್ರಯಿಸುತ್ತಿರುವುದರಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಪಾರ್ಸೆಲ್ ಮೂಲಕ ಆಹಾರ ವಿತರಿಸಲಾಗುತ್ತಿದೆ. ಎಷ್ಟೇ ಮಂದಿ ಬಂದರೂ ಅವರನ್ನು ಖಾಲಿ ಹೊಟ್ಟೆಯಲ್ಲಿ ಕಳುಹಿಸದೇ ಆಹಾರ ತಯಾರಿಸಿ ನೀಡುವಂತೆ ಸೂಚಿಸಿದ್ದೇನೆ ಎಂದು ಯೋಜನಾ ನಿರ್ದೇಶಕ ಕೆ.ಸುರೇಶ್ ತಿಳಿಸಿದರು.
ಇನ್ನು, ಕ್ಯಾಂಟೀನ್ಗೆ ಬರುವ ಗ್ರಾಹಕರಿಗೆ ಮಾಸ್ಕ್ ಕಡ್ಡಾಯಗೊಳಿಸಿದ್ದು ಥರ್ಮಲ್ ಸ್ಕ್ರೀನಿಂಗ್ ಆದ ಬಳಿಕವಷ್ಟೇ ಕ್ಯಾಂಟೀನ್ಗೆ ಪ್ರವೇಶ ಕಲ್ಪಿಸಲಾಗುತ್ತಿದೆ. ಇಂದಿರಾ ಕ್ಯಾಂಟೀನ್ ಪ್ರಾರಂಭವಾದಾಗಿನಿಂದ ಇದೇ ಮೊದಲ ಬಾರಿಗೆ ಪಾರ್ಸೆಲ್ ವ್ಯವಸ್ಥೆ ಕಲ್ಪಿಸಲಾಗಿದೆ.