ಕೊಳ್ಳೇಗಾಲ: ಕೊರೊನಾ ಕಾಲಿಟ್ಟು ಈಗಾಗಲೇ 4 ತಿಂಗಳಾಗಿದೆ. ಇಲ್ಲಿಯವರೆಗೂ ಗಡಿ ಜಿಲ್ಲೆಯಲ್ಲಿ ನಾಲ್ಕು ನೂರು ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿವೆ. ಅದರಲ್ಲೂ ಕೊಳ್ಳೇಗಾಲ ಹಾಟ್ ಸ್ಪಾಟ್ ಆಗಿ ಮಾರ್ಪಡುತ್ತಿದೆ.
ಮೊದಲ ಮೂರ್ನಾಲ್ಕು ತಿಂಗಳಲ್ಲಿ ಕೊರೊನಾ ಭೀತಿ ಜನರಲ್ಲಿ ಹೆಚ್ಚಿತ್ತು. ಆದರೆ ಇದೀಗ ಜನರ ನಡವಳಿಕೆ ಹಾಗೂ ತಿರುಗಾಟ ಗಮನಿಸಿದರೆ ಕೊರೊನಾಗೆ ಡೋಂಟ್ ಕೇರ್ ಎಂಬಂತಿದೆ.
ಎಂದಿನಂತೆ ಜನ ಜೀವನ ನಡೆಯುತ್ತಿದೆ. ದಿನ ನಿತ್ಯದ ಅಗತ್ಯ ವಸ್ತು ಖರೀದಿಯಲ್ಲಿ ಜನ ಬ್ಯುಸಿ ಆಗಿದ್ದು, ಸಾಮಾಜಿಕ ಅಂತರವಿಲ್ಲದೆ ಗುಂಪು ಖರೀದಿಗೆ ಮುಂದಾಗಿದ್ದಾರೆ. ಪಟ್ಟಣದ ಪ್ರಮುಖ ರಸ್ತೆಗಳಾದ ಡಾ. ಬಿರ್. ಅಂಬೇಡ್ಕರ್ ರಸ್ತೆ, ಡಾ. ರಾಜ್ ಕುಮಾರ್ ರಸ್ತೆ, ವಿಷ್ಣುವರ್ಧನ್ ರಸ್ತೆ, ಹಾಗೂ ಬಳೆ ಪೇಟೆ ರಸ್ತೆಗಳಲ್ಲಿ ಹೆಚ್ಚಿನ ಜನ ಸಂದಣಿ ಹಾಗೂ ವಾಹನ ದಟ್ಟಣೆ ಹೆಚ್ಚಾಗಿದೆ. ಪ್ರಾರಂಭದಲ್ಲಿ ಕೊರೊನಾಗಿದ್ದ ಭಯ, ಆತಂಕ ಇದೀಗ ಕಡಿಮೆಯಾಗಿದೆ.
ಮಾಸ್ಕ್ ಧರಿಸದೆ ವಾಹನದಲ್ಲಿ ಸಂಚರಿಸುವುದು, ಅಂಗಡಿಗಳ ಮುಂದೆ ತಂಡೋಪತಂಡವಾಗಿ ವಸ್ತುಗಳನ್ನು ಖರೀದಿಸುವುದು, ಅಲ್ಲಲ್ಲಿ ಗುಂಪು ಸೇರಿ ಕಾಲ ಕಳೆಯುವಂತಹ ದೃಶ್ಯಗಳು ಕಂಡುಬರುತ್ತಿವೆ. ಸ್ಥಳೀಯ ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಇದೆಲ್ಲವನ್ನು ನೋಡಿ ಕಣ್ಮುಚ್ಚಿ ಕುಳಿತಂತೆ ಕಾಣುತ್ತಿದೆ.