ಚಾಮರಾಜನಗರ: ಬಹಿರ್ದೆಸೆಗೆ ತೆರಳಿದ್ದ ವೇಳೆ ಚಾಕು ತೋರಿಸಿ ಮಹಿಳೆಯೊಬ್ಬರ ಚಿನ್ನ ಕಿತ್ತುಕೊಂಡು ಖದೀಮರು ಪರಾರಿಯಾಗಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಹೊಸಮಾಲಂಗಿಯಲ್ಲಿ ನಡೆದಿದೆ.
ಸಿಲ್ಕಲ್ಪುರ ಗ್ರಾಮದ ಕುಮಾರಸ್ವಾಮಿ ಎಂಬವರ ಪತ್ನಿ ಕನಕ ಚಿನ್ನ ಕಳೆದುಕೊಂಡವರು. ಹೊಸಮಾಲಂಗಿಯ ಚಾನಲ್ ರಸ್ತೆಯಲ್ಲಿ ನಡೆದು ಬರುವಾಗ ಕಾರಿನಲ್ಲಿದ್ದ ಮುಸುಕುಧಾರಿಗಳು ಚಾಕು ತೋರಿಸಿ ಸರ ಕಿತ್ತಿದ್ದಾರೆ. 28 ಗ್ರಾಂ. ಸರ, 8 ಗ್ರಾಂ ತಾಳಿ, 4 ಗ್ರಾಂ ಗುಂಡುಗಳು ಸೇರಿದಂತೆ 40 ಗ್ರಾಂ ಚಿನ್ನವನ್ನು ಅಪರಿಚಿತರು ದೋಚಿದ್ದಾರೆ ಎನ್ನಲಾಗಿದೆ.
ಒಂದು ವಾರದ ಆಸುಪಾಸಿನಲ್ಲೆ ವ್ಯಾನಿಟಿ ಬ್ಯಾಗಿನಲ್ಲಿದ್ದ ಚಿನ್ನಾಭರಣ, ಬಸ್ ಹತ್ತುವ ವೇಳೆ ಸರ ಎಗರಿಸಿದ್ದು, ಸೇರಿದಂತೆ ಈಗ ಹಾಡಹಗಲೇ ಚಾಕು ತೋರಿಸಿ ಸರ ಕಿತ್ತ ಪ್ರಕರಣ ನಡೆದಿದ್ದು, ಕೊಳ್ಳೇಗಾಲ ನಗರ, ಗ್ರಾಮಾಂತರ ಪ್ರದೇಶದ ಜನರು ಬೆಚ್ಚಿ ಬೀಳುವಂತೆ ಮಾಡಿದೆ.
ಸದ್ಯ, ಸಿಪಿಐ ಶ್ರೀಕಾಂತ್ ನೇತೃತ್ವದಲ್ಲಿ ಪಿಎಸ್ಐ ಅಶೋಕ್, ವೀರಭದ್ರಪ್ಪ ತನಿಖೆ ಕೈಗೊಂಡಿದ್ದು, ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.