ಚಾಮರಾಜನಗರ: ಮಹಿಳಾ ಅಂಬೇಡ್ಕರ್ವಾದಿ, ಲೇಖಕಿ ಹಾಗೂ ಶಾಸಕ ಎನ್ ಮಹೇಶ್ ಪತ್ನಿ ದಿ.ವಿಜಯಾ ಮಹೇಶ್ ಅವರ ಹೆಸರಿನಲ್ಲಿ ಕಾನ್ಷಿ ಫೌಂಡೇಶನ್ ವತಿಯಿಂದ ನಗರದ ಡಾ.ರಾಜ್ ಕುಮಾರ್ ರಂಗ ಮಂದಿರದಲ್ಲಿ ಐವರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಾಹಿತಿ ಡಾ.ಎಂ.ಎಸ್. ವೇದಾಗೆ ಸಾಹಿತ್ಯ ವಿಜಯ ಪ್ರಶಸ್ತಿ, ಗಾಯಕ ಆರ್. ಮಹೇಂದ್ರಗೆ ಸಾಂಸ್ಕೃತಿಕ ಪ್ರಶಸ್ತಿ, ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಸಹಜ ಕೃಷಿ ಬಳಗ ಅಧ್ಯಕ್ಷ ಕಾಳಪ್ಪಗೆ ಸಾವಯವ ಕೃಷಿ ವಿಜಯ ಪ್ರಶಸ್ತಿ, ಶ್ರೀರಂಗಪಟ್ಟಣ ತಾಲೂಕಿನ ಚಂದಗಾಲು ಪರಿಸರ ಪ್ರೇಮಿ ಪರಿಸರ ರಮೇಶ್ಗೆ ಪರಿಸರ ವಿಜಯ ಪ್ರಶಸ್ತಿ, ವಿಶ್ವವಾಣಿ ಸುದ್ದಿ ಸಂಪಾದಕ ಶಿವಕುಮಾರ್ ಬೆಳ್ಳಿತಟ್ಟೆಗೆ ಮಾಧ್ಯಮ ವಿಜಯ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಜೊತೆಗೆ ಬಹುಭಾಷಾ ಕಲಾವಿದ ಅವಿನಾಶ್, ರಾಜ್ಯೋತ್ಸವ ಪಶಸ್ತಿ ಪುರಸ್ಕೃತರಾದ ಸೋಲಿಗರ ಮಾದಮ್ಮ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.
ಊರಿನ ನಂಟು ಬಿಟ್ಟಿಲ್ಲ: ನಟ ಅವಿನಾಶ್ ಸನ್ಮಾನ ಸ್ವೀಕರಿಸಿ ಮಾತನಾಡಿ, ನಾನು ಊರಿನ ನಂಟು ಬಿಟ್ಟಿಲ್ಲ. ಈಗಲೂ ನನ್ನ ಹೆಸರು ಅವಿನಾಶ್ ಯಳಂದೂರು, ನಾನು ಚಾಮರಾಜನಗರ ಜಿಲ್ಲೆಯವನು ಎನ್ನುವುದೇ ಹೆಮ್ಮೆ ಎಂದರು. ಹಾಗೆ ಮಾತನಾಡಿದ ಅವರು, ನಾನು ಹೆಚ್ಚಾಗಿ ಯಾವುದೇ ಸಮಾರಂಭಗಳಿಗೆ ಹೋಗಲ್ಲ, ನನಗೆ ವೇದಿಕೆಯಲ್ಲಿ ಮಾತನಾಡಲು ಬರಲ್ಲ, ಡೈಲಾಗ್ ಬರೆದುಕೊಟ್ಟರೇ ಹೇಳ್ತೀನಿ, ಸ್ವಯಂ ನಾನೇ ಮಾತನಾಡಬೇಕು ಎಂದರೆ ಅಂಜಿಕೆ. ಅದಕ್ಕೇ ಎಲ್ಲಾ ಕಾರ್ಯಕ್ರಮಗಳನ್ನು ತಪ್ಪಿಸಿಕೊಳ್ಳುತ್ತೇನೆ, ನಮ್ಮೂರಿನ ಕಾರ್ಯಕ್ರಮ ಆದ್ದರಿಂದ ಇಲ್ಲಿಗೆ ತಪ್ಪಿಸಿಕೊಳ್ಳಲು ಆಗಲಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ, ಸಂಸದ ಶ್ರೀನಿವಾಸಪ್ರಸಾದ್, ಶಾಸಕ ಮಹೇಶ್ ಉಪಸ್ಥಿತರಿದ್ದರು.
ಇದನ್ನೂ ಓದಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಕಣ್ಣು ಪೊರೆ ಶಸ್ತ್ರಚಿಕಿತ್ಸೆ ಯಶಸ್ವಿ : ಆಸ್ಪತ್ರೆಯಿಂದ ಬಿಡುಗಡೆ