ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಅಟಲ್ ಭೂ ಜಲ ಯೋಜನೆಯನ್ನು ಅನುಷ್ಠಾನಗೊಳಿಸಲಾಯಿತು.
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವತಿಯಿಂದ ನಡೆದ ಕಾರ್ಯಕ್ರಮಕ್ಕೆ ವರ್ಚುವಲ್ ಮೂಲಕ ಸಚಿವ ಮಾಧುಸ್ವಾಮಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಈ ಯೋಜನೆಯ ಸಮರ್ಪಕ ಅನುಷ್ಠಾನ ಅನಿವಾರ್ಯವಾಗಿದೆ. ಅಂತರ್ಜಲ ಮಟ್ಟ ಹೆಚ್ಚದಿದ್ದರೆ ಮುಂದಿನ ಪೀಳಿಗೆ ನೀರಿನ ಸೆಲೆಯೇ ಕಾಣದಂತಹ ದುಸ್ಥಿತಿಗೆ ತಲುಪಲಿದ್ದಾರೆ ಎಂದರು.
ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಮಾತನಾಡಿ, ಗುಂಡ್ಲುಪೇಟೆಯಲ್ಲಿ ಅಂತರ್ಜಲದ ಅತಿಯಾದ ಬಳಕೆಯಿಂದ ಮುಂದಿನ ಪೀಳಿಗೆಗೆ ನೀರು ಸಿಗುವುದೋ ಇಲ್ಲವೋ ಎಂಬ ಆತಂಕಕ್ಕೆ ಅಟಲ್ ಭೂ ಜಲ ಯೋಜನೆ ಪರಿಹಾರವಾಗಿದೆ. ಗುಂಡ್ಲುಪೇಟೆಗೆ ಹೆಚ್ಚಿನ ಅನುದಾನ ಕೊಡುವ ಭರವಸೆಯನ್ನು ಸಚಿವ ಮಾಧುಸ್ವಾಮಿ ನೀಡಿದ್ದಾರೆ. ಈ ಯೋಜನೆಯಿಂದ ಮುಂದಿನ ಪೀಳಿಗೆಗೆ ಹೆಚ್ಚಿನ ಅನುಕೂಲವಾಗಲಿದೆ. ಇದರ ಸಮರ್ಪಕ ಅನುಷ್ಠಾನ ಎಲ್ಲರ ಜವಾಬ್ದಾರಿ.
ಬಾವಿ ತೋಡಿದರೆ ನೀರು ಬರುತ್ತಿದ್ದ ಗುಂಡ್ಲುಪೇಟೆ ತಾಲೂಕಿನಲ್ಲಿ ಈಗ 700-800 ಅಡಿ ಕೊಳವೆ ಬಾವಿ ಕೊರೆದರೂ ಜಲ ಸಿಗದಂತಾಗಿದೆ. ಇಂಗು ಗುಂಡಿ, ಚೆಕ್ ಡ್ಯಾಂಗಳ ನಿರ್ಮಾಣ ಮಾಡಬೇಕಿದ್ದು, ಕೆರೆಗೆ ನೀರು ತುಂಬುವ ಯೋಜನೆಯು ಗುಂಡ್ಲುಪೇಟೆಗೆ ಈಗ ವರದಾನವಾಗಿದೆ ಎಂದು ಅಭಿಪ್ರಾಯಪಟ್ಟರು.
ಓದಿ: ಕಳ್ಳತನ ಒಪ್ಪಿಕೊಳ್ಳುವಂತೆ ಮನೆಕೆಲಸದವಳಿಗೆ ಪೊಲೀಸರಿಂದ ಹಿಂಸೆ.. ಆರೋಪ
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಡಿಡಿ ಲಕ್ಷ್ಮಮ್ಮ, ಗುಂಡ್ಲುಪೇಟೆ ತಾಲೂಕಿನಲ್ಲಿ ನೀರಿನ ಪ್ರಸ್ತುತ ಅಂಕಿ-ಅಂಶಗಳನ್ನು ಪ್ರಸ್ತುತಪಡಿಸಿದರು. ಯೋಜನೆ ಚಾಲನೆಯ ಪ್ರಯುಕ್ತ ಗುಂಡ್ಲುಪೇಟೆ ತಾಲೂಕಿನ ಹುಂಡಿಪುರ ಗ್ರಾಮದಲ್ಲಿ ಅಧ್ಯಯನಕ್ಕಾಗಿ ಬೋರ್ವೆಲ್ ಕೊರೆಸಲಾಯಿತು.