ಚಾಮರಾಜನಗರ: ಮುಂಬರುವ ವಿಧಾನಸಭೆ ಚುನಾವಣೆಗೆ ಬಿಜೆಪಿ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಚಾಮರಾಜನಗರ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಜಿಲ್ಲೆಯ ಬಿಜೆಪಿ ಟಿಕೆಟ್ ಆಕಾಂಕ್ಷಿ ರುದ್ರೇಶ್ ಅವರು ಸೋಮಣ್ಣ ವಿರುದ್ಧ ಹರಿಹಾಯ್ದಿದ್ದಾರೆ.
ಚಾಮರಾಜನಗರದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿ, ರಾಮನಗರ ಅಥವಾ ಚಾಮರಾಜನಗರದಲ್ಲಿ ಸೋಮಣ್ಣ ಪಕ್ಷ ಸಂಘಟನೆಗೆ ಒಂದಿನಿತೂ ಶ್ರಮಿಸಿಲ್ಲ. ಅವರ ತವರಲ್ಲೇ ಅವರು ಪಕ್ಷ ಸಂಘಟಿಸಿಲ್ಲ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಲೋಕಸಭೆ ಚುನಾವಣೆಯಲ್ಲಿ ಪ್ರಚಾರಕ್ಕೂ ಬಂದಿಲ್ಲ. ಇಂಥ ವ್ಯಕ್ತಿಗೆ ಎರಡು ಟಿಕೆಟ್ ಕೊಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಷರತ್ತು ಹಾಕಿದ್ದಾರೆ ಸೋಮಣ್ಣ: ಪಕ್ಷ ಸಂಘಟನೆಗೆ ಕರೆದರೆ ಅವರು ನನಗೂ ಬಿಜೆಪಿಗೂ ಸಂಬಂಧವಿಲ್ಲ. ನಾನು ಸರ್ಕಾರದ ಸಚಿವ ಎಂದು ಹೇಳುತ್ತಿದ್ದರು. ಪಕ್ಷದಿಂದ ಒಂದು ಕಾಲು ಹೊರಗಿಟ್ಟಿದ್ದ ಸೋಮಣ್ಣ, ಕೆಲವು ಷರತ್ತುಗಳಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಚಾಮರಾಜನಗರದಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲಲು ಅವರೇ ಕಾರಣ. ಈಗ ಸೋಮಣ್ಣ ಅಭ್ಯರ್ಥಿ ಆಗಿರುವುದು ವಿಪರ್ಯಾಸ ಎಂದರು.
ಚುನಾವಣೆ ಬಳಿಕ ಕಾಂಗ್ರೆಸ್‌ಗೆ ಹೋಗ್ತಾರೆ: ಕಳೆದ ಬಾರಿ ಪ್ರೊ.ಮಲ್ಲಿಕಾರ್ಜುನಪ್ಪ ಸೋಲಲು ಸೋಮಣ್ಣ ಕಾರಣಕರ್ತರು. ಇದಕ್ಕೆ ಸಂಬಂಧಿಸಿದಂತೆ ಆಡಿಯೋ ಕೂಡ ಇದೆ. ಚಾಮರಾಜನಗರದಲ್ಲಿ ಎಲ್ಲರನ್ನೂ ಸೋಲಿಸಿ ಅವರೂ ಮಾತ್ರ ಗೆಲ್ಲುತ್ತಾರೆ. ಗೆದ್ದ ಬಳಿಕ ಸಿದ್ದರಾಮಯ್ಯ ಜೊತೆ ಕೈ ಜೋಡಿಸಿ ಕಾಂಗ್ರೆಸ್‌ಗೆ ಹೋಗುವರೆಂಬ ಅನುಮಾನವಿದೆ ಎಂದು ಆರೋಪಿಸಿದರು. ಸೋಮಣ್ಣ ಕಾಂಗ್ರೆಸ್‌ಗೆ ಹೋಗದಂತೆ ಹೈಕಮಾಂಡ್ ಬಿಗಿ ಕ್ರಮ ಕೈಗೊಳ್ಳಬೇಕು. ಅವರು ಮಾತನಾಡುವುದಲ್ಲ ಬರೀ ಸುಳ್ಳು, ಸುಳ್ಳು ಸೋಮಣ್ಣ ಎಂತಲೇ ಜನರು ಕರೆದಿದ್ದಾರೆ ಎಂದು ಲೇವಡಿ ಮಾಡಿದರು.
ವಿಡಿಯೋ ಶೀಘ್ರ ಬಿಡುಗಡೆ: ಪಕ್ಷದ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ವಿರುದ್ಧವಾಗಿ ಸೋಮಣ್ಣ ಕಾರ್ಯಕರ್ತರ ಜತೆ ಮಾತನಾಡುತ್ತಾರೆ. ಅದರ ಆಡಿಯೋಗಳು ನನ್ನಲ್ಲಿವೆ. ಸಿದ್ಧಗಂಗಾ ಶ್ರೀಗಳ ವಿರುದ್ಧವೂ ಮಾತನಾಡಿದ್ದಾರೆ. ಅದರ ಆಡಿಯೋ ಕೂಡ ಇದೆ. ಶೀಘ್ರದಲ್ಲಿ ಅದನ್ನು ಬಿಡುಗಡೆ ಮಾಡುತ್ತೇನೆ ಎಂದು ರುದ್ರೇಶ್ ಬಾಂಬ್ ಸಿಡಿಸಿದ್ದಾರೆ.
ಲಿಂಗಾಯತರನ್ನು ತುಳಿಯುವ ಸೋಮಣ್ಣ: ಲಿಂಗಾಯತ ಸಮಾಜದ ಅನಭಿಷಿಕ್ತ ದೊರೆ, ಸ್ವಯಂ ಘೋಷಿತ ನಾಯಕ ಎಂದು ಹೇಳಿಕೊಂಡು ಸೋಮಣ್ಣ ತಿರುಗುತ್ತಾರೆ. ಎಲ್ಲ ಲಿಂಗಾಯತ ನಾಯಕರನ್ನು ತುಳಿದಿದಿದ್ದಾರೆ. ಬೆಂಕಿ ಮಹಾದೇವಪ್ಪ, ಸಿ. ಗುರುಸ್ವಾಮಿ, ಪ್ರೊ. ಮಲ್ಲಿಕಾರ್ಜುನಪ್ಪ, ಪ್ರೀತಂ ನಾಗಪ್ಪ, ಪರಮಶಿವತಯ್ಯ ಎಲ್ಲರನ್ನೂ ತುಳಿದು ಈಗ ನನ್ನ ತಲೆ ಮೇಲೆ ಕಾಲಿಡಲು ಬಂದಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
ವರುಣಾದಲ್ಲಿ ಮಾತ್ರ ಸ್ಫರ್ಧಿಸಿ ಗೆದ್ದು ಬರಲಿ: ಸೋಮಣ್ಣ ಅವರು ಮಹಾನ್ ನಾಯಕರು. ಅವರಿಗೆ ನಿಜವಾಗಿಯೂ ತಾಕತ್ ಇದ್ದರೆ ವರುಣಾದಲ್ಲಿ ಮಾತ್ರ ಸ್ಪರ್ಧಿಸಿ ಗೆದ್ದು ಬರಲಿ. ಇಲ್ಲವೇ ಕಾರ್ಯಕರ್ತರಿಗೆ ಕೊಡಲಿ. ನಾವು ತೋರಿಸುತ್ತೇವೆ. ನಮ್ಮ ಬಲವನ್ನು ಹೈಕಮಾಂಡ್ ಗಂಭೀರವಾಗಿ ಚಿಂತಿಸಿ ಟಿಕೆಟ್ ಪ್ರಕಟಣೆಯನ್ನು ಮರು ಪರಿಶೀಲಿಸಬೇಕೆಂದು ಒತ್ತಾಯಿಸಿದರು.
ಇದನ್ನೂಓದಿ: ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ತವನಪ್ಪ ಅಷ್ಟಗಿ ರಾಜೀನಾಮೆ