ಚಾಮರಾಜನಗರ: ವ್ಯಾಪಾರಿಗಳು ಮಾಸ್ಕ್ ಹಾಕಿಕೊಳ್ಳದೆ ವ್ಯವಹರಿಸಿದರೆ ಅಂಗಡಿ ಪರವಾನಗಿಯನ್ನೇ ರದ್ದುಗೊಳಿಸಲು ಡಿಸಿ ನಿರ್ದೇಶನದಂತೆ ಯೋಜನಾ ನಿರ್ದೇಶಕರು ಮುಂದಾಗಿದ್ದಾರೆ.
ಈ ಕುರಿತು ಇಂದು ಯೋಜನಾ ನಿರ್ದೇಶಕ ಕೆ.ಸುರೇಶ್, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದು, ಮಾಸ್ಕ್ ಧರಿಸದೆ ಗ್ರಾಹಕರೊಂದಿಗೆ ವ್ಯವಹರಿಸುವ ಅಂಗಡಿ, ಮಳಿಗೆ ವ್ಯಾಪಾರಿಗಳಿಗೆ ದುಪ್ಪಟ್ಟು ದಂಡ ವಿಧಿಸಿ, ಅಂಗಡಿಗಳನ್ನು ಮುಚ್ಚಿ ವ್ಯಾಪಾರ ಪರವಾನಗಿಯನ್ನೇ ರದ್ದುಗೊಳಿಸುವಂತೆ ಸೂಚಿಸಿದ್ದಾರೆ.
ಪೊಲೀಸ್ ಇಲಾಖೆ ಜೊತೆ ಜಂಟಿ ಕಾರ್ಯಾಚರಣೆ ನಡೆಸಿ ಸರ್ಕಾರಿ ಮತ್ತು ಖಾಸಗಿ ಬಸ್ಗಳಲ್ಲಿ ಹಾಗೂ ಇನ್ನಿತರೆ ವಾಹನಗಳಲ್ಲಿ ಸಂಚರಿಸುವ ಪ್ರಯಾಣಿಕರು, ಬೈಕ್ ಸವಾರರು ಜೊತೆಗೆ ಪಾದಚಾರಿಗಳು ಮಾಸ್ಕ್ ಧರಿಸದೆ ಇದ್ದರೆ ಸ್ಥಳದಲ್ಲೇ ದಂಡ ವಿಧಿಸಿ ಅರಿವು ಮೂಡಿಸಬೇಕು ಎಂದು ಸೂಚಿಸಿದ್ದಾರೆ.
ಮುಂಚೂಣಿ ವಾರಿಯರ್ಸ್ ಲಸಿಕೆ ಹಾಕಿಸಿಕೊಂಡಿರುವುದನ್ನು ಖಾತ್ರಿಪಡಿಸಿಕೊಂಡು ನಗರಸಭೆ ಆಯುಕ್ತರು, ಮುಖ್ಯಾಧಿಕಾರಿಗಳು ವರದಿ ನೀಡುವಂತೆ ಅವರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ದಿನೇ ದಿನೆ ಕೊರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. 45 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕೆಂದು ಮನವಿ ಮಾಡಿದರು.