ಚಾಮರಾಜನಗರ: ಹಿಂದಿ ಸುಂದರ ಭಾಷೆ, ಅಕ್ಕರೆಯಿಂದ ಈ ಭಾಷೆ ಕಲಿಸಿದರೆ ಅದು ಹೇರಿಕೆಯಾಗಲ್ಲ ಎಂದು ಹೇಳುವ ಮೂಲಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಕೇಂದ್ರದ ನಡೆಗೆ ಬೆಂಬಲ ಸೂಚಿಸಿದ್ರು.
ರಾಜ್ಯ ಪ್ರೌಢ ಶಾಲಾ ಹಿಂದಿ ಭಾಷಾ ಶಿಕ್ಷಕರ ಸಂಘ ಆಯೋಜಿಸಿದ್ದ ಹಿಂದಿ ಶೈಕ್ಷಣಿಕ ಸಮಾರಂಭ ಮತ್ತು ಹಿಂದಿ ದಿವಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾನು ಉಪಾಧ್ಯಾಯರಲ್ಲಿ ಏಟು ತಿಂದು ಹಿಂದಿ ಕಲಿತೆ. ಅಟಲ್‌ಜೀ ಭಾಷಣವನ್ನು ಕೇಳಿ ಕೇಳಿ ಹೆಚ್ಚು ಹಿಂದಿ ಕಲಿತೆ. ಆದ್ದರಿಂದ, ಅಕ್ಕರೆಯಿಂದ ಹಿಂದಿ ಕಲಿಸಿದಾಗ ಹಿಂದಿ ಹೇರಿಕೆ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದಿದ್ದಾರೆ. ಯಾರೂ ಕೂಡ ಹಿಂದಿಯನ್ನು ವಿರೋಧಿಸಬಾರದು. ನಮ್ಮತನ ಉಳಿಸಿಕೊಂಡು ಅನ್ಯ ಭಾಷೆಯನ್ನು ಪ್ರೀತಿಸಬೇಕು, ಮಾಜಿ ಸಚಿವ ಸಿ.ಎಂ.ಉದಾಸಿ 9 ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಾರೆ ಎಂದರು.
ವರ್ಗಾವಣೆ ನೀತಿ ಬದಲು
ಶಿಕ್ಷಕರು ಇಷ್ಟ ಪಟ್ಟು ಶಾಲೆಗೆ ಹೋದಾಗ ಮಾತ್ರ ಮಕ್ಕಳಿಗೆ ಉತ್ತಮವಾಗಿ ಪಾಠ ಹೇಳಲು ಸಾಧ್ಯ. ಕಡ್ಡಾಯ ಶಿಕ್ಷಕರ ವರ್ಗಾವಣೆ ಎನ್ನುವುದೇ ತಪ್ಪು ಎಂದು ಶಿಕ್ಷಣ ಇಲಾಖೆಯ ವರ್ಗಾವಣೆ ನೀತಿಗೆ ಅಸಮಾಧಾನ ವ್ಯಕ್ತಪಡಿಸಿದರು. ಶಿಕ್ಷಣ ಇಲಾಖೆಯಲ್ಲಿನ ನ್ಯೂನತೆಗಳನ್ನ ಸರಿಪಡಿಸಲು ಶೀಘ್ರ ಸಭೆ ಕರೆಯಲಾಗುತ್ತದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಶಿಕ್ಷಕ ಸ್ನೇಹಿ ವರ್ಗಾವಣೆ ನೀತಿ ಜಾರಿಗೊಳಿಸಲು ಚಿಂತಿಸಲಾಗಿದೆ ಎಂದು ಶಿಕ್ಷಕರಿಗೆ ಸಿಹಿಸುದ್ದಿ ತಿಳಿಸಿದ್ರು.
ಸಂತೋಷ್ ಜೀ ಗೆ ಸಮಯವಿಲ್ಲ:
ಯಡಿಯೂರಪ್ಪನವರನ್ನು ಬಿಜೆಪಿ ಏಕಾಂಗಿ ಮಾಡುತ್ತಿದೆ ಎಂಬ ಆರೋಪ ಸರಿಯಲ್ಲ. ಯಡಿಯೂರಪ್ಪರನ್ನು ಏಕಾಂಗಿ ಮಾಡುವ ಯಾರ ಉದ್ದೇಶ ಸಫಲವಾಗಲ್ಲ, ಬಿಎಸ್ವೈ ನಮ್ಮ ನಾಯಕರು, ಅವರು ರೈತನಾಯಕನಾಗಿ ಬೆಳೆದು ಬಿಜೆಪಿ ಕಟ್ಟಿದ್ದಾರೆ ಎಂದರು.
ರಾಜ್ಯದ ಆಡಳಿತದಲ್ಲಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಮೂಗು ತೂರಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿ ಸಂತೋಷ್ ಜೀ ನಮ್ಮ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ. ನಮ್ಮ ರಾಜ್ಯದಲ್ಲಿ ನಿರಂತರವಾಗಿ ಪಕ್ಷ ಬೆಳೆಸಿದ್ದಾರೆ. ಸಂತೋಷ್ ಜೀ ಯವರಿಗೆ ಇಡಿ ರಾಷ್ಟ್ರದ ಜವಾಬ್ದಾರಿ ಇದೆ. ಆದ್ದರಿಂದ, ಅವರಿಗೆ ರಾಜ್ಯ ಸರ್ಕಾರದ ಆಡಳಿತದಲ್ಲಿ ಮೂಗು ತೂರಿಸಲು ಸಮಯವಿಲ್ಲ. ಆ ಮನಸ್ಥಿತಿಯೂ ಇಲ್ಲ ಎಂದು ತಿಳಿಸಿದರು.
ಇದೇ ವೇಳೆ ಮಲೆಮಹದೇಶ್ವರ ಬೆಟ್ಟದಲ್ಲಿ ಹಸು ಸಾಗಾಣೆ ಬಗ್ಗೆ ಪರಿಶೀಲನೆ ನಡೆಸುತ್ತೇನೆ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುತ್ತೇನೆ ಎದರು. ಅಲ್ಲದೆ ಸುಳ್ವಾಡಿ ವಿಷ ಪ್ರಸಾದ ದುರಂತದ ಸಂತ್ರಸ್ಥರಿಗೆ ಪರಿಹಾರ ತಲುಪದಿರುವ ಕುರಿತು ಪರಿಶೀಲಿಸುತ್ತೇನೆ ಎಂದು ಭರವಸೆ ನೀಡಿದರು.