ಚಾಮರಾಜನಗರ: ಹಿಜಾಬ್ ಬೇಕು ಎನ್ನುವ ಕೂಗು ಈಗ ಚಾಮರಾಜನಗರದಲ್ಲೂ ಆರಂಭವಾಗಿದ್ದು, ನೂರಾರು ಮುಸ್ಲಿಂ ಮಹಿಳೆಯರು ಇಂದು ನಗರದಲ್ಲಿ ದಿಢೀರ್ ಪ್ರತಿಭಟನೆ ನಡೆಸಿ ಶಿರವಸ್ತ್ರ ತಮ್ಮ ಮೂಲಭೂತ ಹಕ್ಕೆಂದು ಪ್ರತಿಪಾದಿಸಿದರು.
ಶಾಲಾ - ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅವಕಾಶ ನಿರಾಕರಣೆ ವಿರೋಧಿಸಿ ನೂರಾರು ಮಂದಿ ಮಹಿಳೆಯರು, ಮುಸ್ಲಿಂ ವಿದ್ಯಾರ್ಥಿನಿಯರು ಸಂಜೆ ದಿಢೀರ್ ನಗರದ ಲಾರಿ ನಿಲ್ದಾಣದಿಂದ ಜಿಲ್ಲಾಡಳಿತ ಭವನಕ್ಕೆ ತೆರಳಿ ಹಿಜಾಬ್ ತಮ್ಮ ಮೂಲ ಹಕ್ಕು, ಬೇರೆಯವರು ಬಿಂದಿ, ಬಳೆಯಂತೆ ತಮ್ಮ ಮಕ್ಕಳು ಹಿಜಾಬ್ ಧರಿಸುತ್ತಾರೆ, ಹಿಜಾಬ್ ಸಮವಸ್ತ್ರದ ಒಂದು ಭಾಗವಾಗಿಯೇ ಇದೆ, ಇದು ತಮ್ಮಗಳ ಹಕ್ಕೆಂದು ಪಾಲಕರು ಆಗ್ರಹಿಸಿದರು.
ಇಸ್ಲಾಂ ಧರ್ಮದ ಧಾರ್ಮಿಕ ಮೂಲ ತತ್ತ್ವಗಳ ಅನುಗುಣವಾಗಿ ಹೆಣ್ಣು ಶಿರವಸ್ತ್ರ ಧರಿಸುವುದು ಕಡ್ಡಾಯಗೊಳಿಸಿದೆ. ಆದುದರಿಂದ ಒಂದು ವೇಳೆ ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಿದರೆ ಮುಸ್ಲಿಂ ಹೆಣ್ಣುಮಕ್ಕಳಿಗೆ ಸಮವಸ್ತ್ರದ ಭಾಗವಾಗಿರುವ ಶಾಲನ್ನು ಬಳಸಿ ಶಿರವಸ್ತ್ರ ಧರಿಸಲು ಅವಕಾಶ ನೀಡಬೇಕು.
ಹಿಜಾಬ್ ನಮ್ಮ ಸಂವಿಧಾನದ ಬದ್ದವಾದ ಹಕ್ಕು, ನಮಗೆ ಸಂವಿಧಾನ ನೀಡಿದ ಹಕ್ಕುಗಳನ್ನು ಮನುವಾದಿಗಳು ಕಸಿಯುವ ಕೆಲಸವನ್ನು ಮಾಡುತ್ತಿದ್ದಾರೆ. ಸಂವಿಧಾನದಲ್ಲಿ ಪ್ರತಿಯೊಂದು ಧರ್ಮದ ಧಾರ್ಮಿಕ ಆಚರಣೆಗೆ ಅವಕಾಶ ಕೊಟ್ಟಿದೆ. ಮುಸ್ಲಿಂ ವಿದ್ಯಾರ್ಥಿನಿಯರ ಹಿಜಾಬ್ ನಿರಾಕರಣೆ ಶಿಕ್ಷಣದ ನಿರಾಕರಣೆಯಾಗಿದ್ದು. ಸಂವಿಧಾನದ, ಪ್ರಜಾಪ್ರಭುತ್ವ ನಿರಾಕರಣೆ ಕೂಡ ಆಗಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಒಟ್ಟಿನಲ್ಲಿ ವಿದ್ಯಾರ್ಥಿನಿಯರಿಗಿಂತ ನೂರಾರು ಸಂಖ್ಯೆಯಲ್ಲಿ ಸೇರಿದ ಮಹಿಳೆಯರು ಹಿಜಾಬ್ ಬೇಕೆಂದು ಒತ್ತಾಯಿಸಿದ್ದು ಚಾಮರಾಜನಗರದಲ್ಲೂ ಈಗ ಶಿರವಸ್ತ್ರದ ಪರ ಕೂಗೆದ್ದಿದೆ.