ಚಾಮರಾಜನಗರ: ಬಹುಜನ ಸಮಾಜವಾದಿ ಪಕ್ಷದ ವಿಪ್ ಉಲ್ಲಂಘಿಸಿ ಬಿಜೆಪಿ ಬೆಂಬಲಿಸಿದ್ದ ಕಾರಣಕ್ಕಾಗಿ ಅನರ್ಹಗೊಂಡ ಕೊಳ್ಳೇಗಾಲ ನಗರಸಭೆಯ ಏಳು ಮಂದಿ ಸದಸ್ಯರು ಸಲ್ಲಿಸಿದ್ದ ಮೇಲ್ಮನವಿ ಹೈಕೋರ್ಟ್ನಲ್ಲಿ ವಜಾಗೊಂಡಿದೆ. ತಮ್ಮನ್ನು ನಗರಸಭೆ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿದ ಜಿಲ್ಲಾಧಿಕಾರಿ ಆದೇಶ ರದ್ದುಪಡಿಸಬೇಕು ಎಂದು ಕೋರಿ ಕೊಳ್ಳೇಗಾಲ ನಗರಸಭೆ ಸದಸ್ಯರಾಗಿದ್ದ ಪವಿತ್ರಾ ಹಾಗೂ ಇತರ ಆರು ಮಂದಿ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಪೀಠವು ಜಿಲ್ಲಾಧಿಕಾರಿ ಆದೇಶವನ್ನು ಎತ್ತಿ ಹಿಡಿದಿತ್ತು.
ಆದರೆ, ಈ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು. ಈ ಕುರಿತು ಸುದೀರ್ಘ ವಿಚಾರಣೆಯ ಬಳಿಕ ಹೈಕೋರ್ಟ್ ವಿಭಾಗೀಯ ಪೀಠವು ಮೇಲ್ಮನವಿ ವಜಾಗೊಳಿಸಿ, ಜಿಲ್ಲಾಧಿಕಾರಿ ನೀಡಿದ್ದ ಆದೇಶವನ್ನೇ ಎತ್ತಿ ಹಿಡಿದಿದೆ.
ರಾಜಕೀಯ ಜಿದ್ದಾಜಿದ್ದಿ: ಬಿಎಸ್ಪಿಯಿಂದ ಶಾಸಕ ಎನ್.ಮಹೇಶ್ ಉಚ್ಚಾಟನೆಗೊಂಡ ಬಳಿಕ ಕೊಳ್ಳೇಗಾಲ ನಗರಸಭೆ ಚುನಾವಣೆಯಲ್ಲಿ 'ಆನೆ' ಗುರುತಿನಿಂದ ಗೆದ್ದಿದ್ದ 9 ಸದಸ್ಯರಲ್ಲಿ ಏಳು ಮಂದಿ ಸದಸ್ಯರು ಶಾಸಕ ಮಹೇಶ್ ಬಣ ಸೇರಿಕೊಂಡಿದ್ದರು. ಬಳಿಕ 2020ರ ಅ.29ರಂದು ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಎಸ್ಪಿ ತನ್ನ ಸದಸ್ಯರಿಗೆ ವಿಪ್ ಜಾರಿ ಮಾಡಿತ್ತು.
ಇದನ್ನೂ ಓದಿ: ವಿಪ್ ಉಲ್ಲಂಘನೆ : ಕೊಳ್ಳೇಗಾಲ ನಗರಸಭೆ ಸದಸ್ಯರನ್ನು ಅನರ್ಹಗೊಳಿಸಿದ್ದ ಡಿಸಿ ಆದೇಶ ಎತ್ತಿ ಹಿಡಿದ ಹೈಕೋರ್ಟ್
ಇದನ್ನು ಉಲ್ಲಂಘಿಸಿದ ಮಹೇಶ್ ಬಣದ ಬಿಎಸ್ಪಿ ಏಳು ಮಂದಿ ಸದಸ್ಯರು ಬಿಜೆಪಿ ಪರ ಮತ ಚಲಾಯಿಸಿದ್ದರು. ಪಕ್ಷದ ವಿಪ್ ಉಲ್ಲಂಘಿಸಿದ್ದ ಸದಸ್ಯರನ್ನು ಹುದ್ದೆಯಿಂದ ಅನರ್ಹಗೊಳಿಸುವಂತೆ ಕೋರಿ ಬಿಎಸ್ಪಿ ನಗರಸಭೆ ಸದಸ್ಯೆ ಜಿ.ಜಯಮೇರಿ ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ದೂರಿನ ವಿಚಾರಣೆ ನಡೆಸಿದ್ದ ಅಂದಿನ ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ, ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ (ಪಕ್ಷಾಂತರ ನಿಷೇಧ) ಕಾಯ್ದೆ 1987ರ ಅಡಿ ಏಳು ಮಂದಿ ಸದಸ್ಯರನ್ನು ಅನರ್ಹಗೊಳಿಸಿ ಕಳೆದ ಸೆ.6ರಂದು ಆದೇಶಿಸಿದ್ದರು.
ಜಿಲ್ಲಾಧಿಕಾರಿಯ ಈ ಆದೇಶದಿಂದ ನಗರಸಭೆ ಸದಸ್ಯಸ್ಥಾನ ಕಳೆದುಕೊಂಡ ಗಂಗಮ್ಮ, ನಾಗಮಣಿ, ನಾಗಸುಂದ್ರಮ್ಮ, ಪ್ರಕಾಶ್, ರಾಮಕೃಷ್ಣ, ನಾಸಿರ್ ಷರೀಫ್ ಹಾಗೂ ಪವಿತ್ರಾ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ನಲ್ಲಿ ಅರ್ಜಿ ವಿಚಾರಣೆ ನಡೆದು 2021ರ ಸೆ.25ರಂದು ಜಿಲ್ಲಾಧಿಕಾರಿ ಆದೇಶವನ್ನು ಎತ್ತಿ ಹಿಡಿಯಲಾಗಿತ್ತು. ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು. ಈಗ ಮೇಲ್ಮನವಿಯಲ್ಲೂ ಸೋಲುಂಟಾಗಿದೆ.
ಇದನ್ನೂ ಓದಿ: ಇಬ್ಬರು ಶಾಸಕರ ಸದಸ್ಯತ್ವ ರದ್ದುಪಡಿಸಲು ನಾಳೆ ಸ್ಪೀಕರ್ಗೆ ಜೆಡಿಎಸ್ ದೂರು