ಚಾಮರಾಜನಗರ: ಗುರುವಾರ ಬೆಳಗ್ಗೆಯಿಂದ ಸುರಿದ ಜೋರು ಮಳೆಗೆ ಜಿಲ್ಲಾ ಕೇಂದ್ರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ನೀರು ನಿಂತಿದ್ದು, ಜಿಲ್ಲಾಡಳಿತ ಭವನ ದ್ವೀಪವಂತಾಗಿದೆ. ನಗರದ ರಸ್ತೆಗಳ ಮೇಲೂ ನೀರು ಹರಿಯುತ್ತಿರುವುದು ಹಾಗೂ ಬೈಕ್ಗಳು ಮುಳುಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ರಜತ ಮಹೋತ್ಸವ ಆಚರಿಸಿಕೊಳ್ಳುವ ಜಿಲ್ಲೆಯಲ್ಲಿನ ಒಳಚರಂಡಿ ಅವ್ಯವಸ್ಥೆಗೆ ನೆಟ್ಟಿಗರು ಕಿಡಿಕಾರಿದ್ದಾರೆ.
ಜಿಲ್ಲಾಡಳಿತ ಭವನ ಅಕ್ಷರಶಃ ದ್ವೀಪದಂತಾಗಿದ್ದು, ಭವನದ ಆವರಣದಲ್ಲಿ ೪ ಅಡಿ ನೀರು ನಿಂತಿದೆ. ನಿರಂತರವಾಗಿ ಮಳೆಯಿಂದ ನೀರಿನ ಮಟ್ಟ ಇಳಿಯದ ಕಾರಣ ವಾಹನ ಸವಾರರು ರಸ್ತೆಯಲ್ಲಿ ಪರದಾಡುವಂತಾಗಿದೆ.
ರಸ್ತೆ ಮೇಲೆ ನೀರು ನಿಂತ ಪರಿಣಾಮ ಬೀದಿ ಬದಿ ವ್ಯಾಪಾರಿಗಳು ನಷ್ಟಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಚಾಮರಾಜನಗರ ತಾಲೂಕಿನ ಎಣ್ಣೆಹೊಳೆ ವರ್ಷದಲ್ಲಿ ಮೂರನೇ ಬಾರಿಗೆ ಕೋಡಿ ಬಿದ್ದಿದೆ. ತಮಿಳುನಾಡು ಭಾಗದಲ್ಲಿ ಜೋರು ಮಳೆಯಾಗುತ್ತಿರುವುದರಿಂದ ಚಿಕ್ಕಹೊಳೆ, ಸುವರ್ಣಾವತಿ ಜಲಾಶಯದಿಂದ ಹೆಚ್ಚುವರಿ ನೀರನ್ನು ಹೊರ ಬಿಡಲಾಗುತ್ತಿದೆ.
ಹನೂರು ತಾಲೂಕಿನ ಕೊರಮನ ಕತ್ರಿ ಸೇತುವೆ ಮೇಲೆ ನೀರು ಹರಿದಿದ್ದರಿಂದ ಕಳೆದ 3 ದಿನಗಳಿಂದಲೂ ತಮಿಳುನಾಡಿನ ಸತ್ಯಮಂಗಲಂಗೆ ತೆರಳುವ ರಸ್ತೆ ಸಂಪರ್ಕ 5-6 ತಾಸುಗಳ ಕಾಲ ಕಡಿತಗೊಳ್ಳುತ್ತಿದೆ. ಬಸ್ಸುಗಳ ಸಂಚಾರವೂ ಸ್ಥಗಿತಗೊಂಡಿದೆ.
ಮಾದಪ್ಪನ ಬೆಟ್ಟದ ಮಜ್ಜನ ಬಾವಿ ಮುಳುಗಡೆ: ಮಳೆಗೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿನ ನಂದನವನ ನೀರಿನಿಂದ ಆವೃತವಾಗಿದ್ದರೆ, ಮಜ್ಜನ ಬಾವಿಯೇ ಮುಳುಗಡೆಯಾಗಿದೆ. ಮಾದಪ್ಪನಿಗೆ ನಿತ್ಯ ತ್ರಿಕಾಲ ಪೂಜೆ ನೆರವೇರಿಸಲು ಆಗ್ರೋದಕ ತರುವ ನಂದನವನ ಹಾಗೂ ಮಜ್ಜನ ಬಾವಿಯು ಸಂಪೂರ್ಣ ನೀರಿನಿಂದ ಆವೃತವಾಗಿದೆ. ಇದರಿಂದ ಶ್ರಾವಣ ಮಾಸದ ಪೂಜೆ ನೆರವೇರಿಸುವ ಅರ್ಚಕರು ಮತ್ತೊಂದು ಬಾವಿಯಿಂದ ಜಲ ತಂದು ಮಾದಪ್ಪನಿಗೆ ಪೂಜೆ ಸಲ್ಲಿಸಿದ್ದಾರೆ.
ಇತ್ತ ಪ್ರಗತಿಯಲ್ಲಿರುವ ದೊಡ್ಡಕೆರೆ ಕಲ್ಯಾಣಿ ಕಾಮಗಾರಿಯಲ್ಲಿ ಕಟ್ಟೆಗಳು ಕುಸಿದಿದೆ. ಜೊತೆಗೆ ತಂಬಡಿಗೇರಿಯ ಚರಂಡಿಯ ಕೊಳಚೆ ನೀರು ನಂದನವನಕ್ಕೆ ನುಗ್ಗಿದ ಪರಿಣಾಮ ಮಜ್ಜನದ ಬಾವಿ ನೀರು ಕಲುಷಿತಗೊಂಡಿದೆ.
ಕಾವೇರಿಗೆ ಹಾರಿದ ಯುವಕ: ಯುವಕನೋರ್ವ ಭೋರ್ಗರೆದು ಹರಿಯುತ್ತಿರುವ ಕಾವೇರಿ ನದಿಗೆ ಹಾರಿರುವ ಘಟನೆ ಕೊಳ್ಳೇಗಾಲ ತಾಲೂಕಿನ ದಾಸನಪುರ ಸೇತುವೆಯಲ್ಲಿ ನಡೆದಿದೆ. ನದಿಗೆ ಹಾರಿರುವ ವ್ಯಕ್ತಿ ಕೊಳ್ಳೇಗಾಲ ಪಟ್ಟಣದ ಶಾಂತರಾಜು(28) ಎಂದು ಗುರುತಿಸಲಾಗಿದೆ. ಸೇತುವೆ ಮೇಲೆ ಬೈಕ್, ಮೊಬೈಲ್, ಬಟ್ಟೆ ಬಿಟ್ಟು ಹಾರಿದ್ದು ಈ ಸಂಬಂಧ ಕುಟುಂಬಸ್ಥರು ಯಾವುದೇ ದೂರು ಕೊಟ್ಟಿಲ್ಲ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಮೂರು ಮಳೆ ಅಬ್ಬರ: ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ರೆಡ್ ಅಲರ್ಟ್!