ಚಾಮರಾಜನಗರ: ಒಂದು ರಾತ್ರಿ ಸುರಿದ ಧಾರಾಕಾರ ಮಳೆಗೆ ಚಾಮರಾಜನಗರದ ಸ್ಥಿತಿ ಅಯೋಮಯವಾಗಿದೆ. ಎಲ್ಲಿ ನೋಡಿದರೂ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಜಿಲ್ಲಾ ಕೇಂದ್ರವೂ ಸೇರಿದಂತೆ ಚಾಮರಾಜನಗರ ತಾಲೂಕು ಮಳೆಗೆ ತತ್ತರಿಸಿದೆ. ಬಿ.ರಾಚಯ್ಯ ಜೋಡಿರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್ಗೆ ನೀರು ನುಗ್ಗಿದ್ದು ನಾಲ್ಕಡಿ ನೀರು ನಿಂತಿದೆ. ಇಂದಿರಾ ಕ್ಯಾಂಟೀನ್ಗೆ ಯಾರೂ ಕಾಲಿಡಲು ಸಾಧ್ಯವಿಲ್ಲ.
ನಗರದ ಸತ್ಯಮಂಗಲಂ ರಸ್ತೆಯಲ್ಲಿರುವ ಕಲ್ಯಾಣ ಮಂಟಪವೊಂದಕ್ಕೆ ನದಿಯಂತೆ ನೀರು ಹರಿದಿದ್ದು ಮದುವೆ ಮನೆ ನೀರಿನ ಮನೆಯಾಗಿ ಬದಲಾಗಿದೆ. ಅಡುಗೆ ಕೋಣೆಯಲ್ಲಿದ್ದ ತರಕಾರಿಗಳು ತೇಲುತ್ತಿವೆ. ಮೊಣಕಾಲುದ್ದ ನೀರಿನಲ್ಲಿ ಬಾಣಸಿಗರು ಅಸಹಾಯಕರಾಗಿ ನಿಂತಿದ್ದು ಕಂಡುಬಂತು. ಇಲ್ಲಿ ಅಟ್ಟಗುಳಿಪುರ ಗ್ರಾಮದವರ ಮದುವೆಗೆ ಸಿದ್ಧತೆ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.
ಚಾಮರಾಜನಗರ ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿರುವ ಐತಿಹಾಸಿಕ ದಿವ್ಯಲಿಂಗೇಶ್ವರ ದೇವಾಲಯಕ್ಕೂ ನೀರು ನುಗ್ಗಿದೆ. ರಾಮಸಮುದ್ರದ ಸಮೀಪ ಇರುವ ಹರಳುಕೋಟೆ ದೇವಾಲಯದ ಆವರಣ, ರಸ್ತೆಗೂ ನೀರು ಸೇರಿಕೊಂಡು ಭಕ್ತರನ್ನು ಕಂಗೆಡಿಸಿದೆ.
ಹನೂರು ತಾಲೂಕಿನ ಲೋಕ್ಕನಹಳ್ಳಿ ಮಾರ್ಗ ಮಧ್ಯೆ ಸಿಗುವ ತಟ್ಟೆಹಳ್ಳಕ್ಕೆ ಸೇತುವೆ ನಿರ್ಮಾಣ ಹಂತದಲ್ಲಿದ್ದು, ನಿರ್ಮಿಸಿದ್ದ ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗಿದೆ. ಕಾಳನಹುಂಡಿ ಸಂಪರ್ಕಿಸುವ ರಸ್ತೆಯೂ ನೀರಿನ ರಭಸಕ್ಕೆ ಕೊರೆದುಕೊಂಡು ಹೋಗಿ ಹಾಳಾಗಿದೆ. ಪರಿಣಾಮ, 3-4 ಗ್ರಾಮಗಳಿಗೆ ರಸ್ತೆ ಸಂಪರ್ಕವಿಲ್ಲದಂತೆ ಆಗಿದೆ.
ಇದನ್ನೂ ಓದಿ: ಮಳೆಯ ಆರ್ಭಟಕ್ಕೆ ಸಾಲು ಸಾಲು ಅವಾಂತರ.. ಬೆಂಗಳೂರಲ್ಲಿ ಅಪಾರ್ಟ್ಮೆಂಟ್ಗಳು ಜಲಾವೃತ