ಚಾಮರಾಜನಗರ: ಲೋಕ ಫಲಿತಾಂಶಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿಯಿದ್ದು ಸಚಿವ ಹೆಚ್.ಡಿ.ರೇವಣ್ಣ ಮಲೆಮಹದೇಶ್ವರ ಬೆಟ್ಟದಲ್ಲಿ ವಿಶೇಷ ಪೂಜೆ ನೆರವೇರಿಸಿದ್ದಾರೆ.
ಭಾನುವಾರ ರಾತ್ರಿಯೇ ಮಲೆಮಹದೇಶ್ವರ ಬೆಟ್ಟದಲ್ಲಿ ವಾಸ್ತವ್ಯ ಹೂಡಿದ್ದ ಅವರು, ಇಂದು ಬೆಳಗಿನ ಜಾವ 4.30ಕ್ಕೆ ಅಭಿಷೇಕ ಸಲ್ಲಿಸಿದ ಬಳಿಕ ಹುಲಿ ವಾಹನ ಸೇವೆಯನ್ನು ನೆರವೇರಿಸಿದ್ದಾರೆ ಎಂದು ತಿಳಿದುಬಂದಿದೆ.
ಮಾದಪ್ಪನ ವಾಹನವಾಗಿರುವ ಹುಲಿ ವಾಹನ ಸೇವೆ ನೆರವೇರಿಸುವುದು ಇಲ್ಲಿನ ವಾಡಿಕೆ. ಹುಲಿ ವಾಹನ ಸೇವೆ ನಡೆಸುತ್ತೇನೆಂದು ಹರಕೆ ಕಟ್ಟಿಕೊಳ್ಳುವುದರಿಂದ ಇಷ್ಟಾರ್ಥಗಳು ನೆರವೇರುತ್ತವೆ ಅನ್ನೋದು ಸ್ಥಳೀಯ ಭಕ್ತಾಧಿಗಳ ಅಚಲ ನಂಬಿಕೆಯಾಗಿದೆ ಎನ್ನುತ್ತಾರೆ ದೇವಸ್ಥಾನದ ಅರ್ಚಕರು.
ಪೂಜೆಗೆ ಅರ್ಧ ತಾಸು ತಡವಾಗಿ ಬಂದ ಸಚಿವರು 4.30ರಿಂದ 6.15 ರವರೆಗೆ ವಿಶೇಷ ಪೂಜೆಗಳಲ್ಲಿ ಪಾಲ್ಗೊಂಡರು ಎಂದು ಮೂಲಗಳು ತಿಳಿಸಿವೆ. ಕೆಲವು ದಿನಗಳ ಹಿಂದೆ, ಶಾಸಕಿ ಅನಿತಾ ಕುಮಾರಸ್ವಾಮಿ ಸಹ ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿ ಪೂಜೆ ಸಲ್ಲಿಸಿದ್ದರು.