ಚಾಮರಾಜನಗರ: ಮಾದಪ್ಪನಿಗೆ ವಿವಿಧ ಸೇವೆಗಳಿಂದ ದಿನವೊಂದಕ್ಕೆ ಲಕ್ಷ-ಲಕ್ಷ ರೂ. ಆದಾಯ ಬರುತ್ತಿದೆ. ಮತ್ತೊಂದೆಡೆ ಪ್ರಾಧಿಕಾರದ ಅವೈಜ್ಞಾನಿಕ ನಿಯಮದಿಂದ ತಮಗಾದ ತೊಂದರೆಗೆ ಬೀದಿ-ಬದಿ ವ್ಯಾಪಾರಿಗಳು ಆಕ್ರೋಶ ಹೊರಹಾಕಿದ್ದಾರೆ.
ಮಹದೇಶ್ವರ ಬೆಟ್ಟದಲ್ಲಿ ಒಂದೇ ದಿನ ಚಿನ್ನದ ರಥ ಸೇವೆಯಿಂದ ಬರೋಬ್ಬರಿ 11.61 ಲಕ್ಷ ರೂ. ಸಂಗ್ರಹವಾಗಿದ್ದು, ಇನ್ನಿತರೆ ಸೇವೆಗಳಿಂದ 3 ಲಕ್ಷಕ್ಕೂ ಅಧಿಕ ಹಣ ಸನ್ನಿಧಿಗೆ ಹರಿದು ಬಂದಿದೆ. ಕಳೆದ ಮೂರು ದಿನಗಳಿಂದ ಬೀದಿ-ಬದಿ ವ್ಯಾಪಾರಿಗಳ ತೆರವಿಗೆ ಮುಂದಾಗಿರುವ ಶ್ರೀ ಮಲೆಮಹದೇಶ್ವರ ಕ್ಷೇತ್ರ ಪ್ರಾಧಿಕಾರವು, ರಸ್ತೆ ಬದಿಯಲ್ಲಿ ವ್ಯಾಪಾರ ವಹಿವಾಟು ನಡೆಸದಂತೆ ಎಚ್ಚರಿಕೆ ನೀಡಿದೆ.
ಇದರಿಂದ ಕಂಗಲಾಗಿರುವ ವ್ಯಾಪಾರಸ್ಥರು ದಿನ ನಿತ್ಯದ ನಮ್ಮ ಸಂಪಾದನೆ 300,500 ದಾಟುವುದಿಲ್ಲ. ಹರಾಜಿನಲ್ಲಿ 50 ಸಾವಿರ ರೂ. ಮೊತ್ತದ ಇಎಂಡಿ ಇಟ್ಟು, ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿಕೆ ಮಾಡಿ ಮಳಿಗೆ ಪಡೆಯುವುದು ನಮ್ಮಿಂದ ಸಾಧ್ಯವಿಲ್ಲ. ಹುಟ್ಟಿದ ಊರಿನಲ್ಲಿ ಜೀವನ ಕಂಡುಕೊಳ್ಳಲು ಬೀದಿ-ಬದಿ ವ್ಯಾಪಾರಕ್ಕೆ ಕುಳಿತರೆ ಪ್ರಾಧಿಕಾರದ ಅಧಿಕಾರಿಗಳು ನಮ್ಮನ್ನು ಬ್ರಿಟಿಷರಿಗಿಂತ ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದಾರೆ. ನಾವು ವ್ಯಾಪಾರ ಮಾಡುವ ವಸ್ತುಗಳನ್ನು ತುಂಬಿಕೊಂಡು ಹೋಗಿಬಿಡುತ್ತಾರೆ ಎಂದು ಆರೋಪಿಸಿದ್ದಾರೆ.