ಚಾಮರಾಜನಗರ: ಐದು ದಿನಗಳ ಕಾಲ ನಡೆಯುವ ಹನೂರು ಕ್ಷೇತ್ರದ ಚಿಕ್ಕಲ್ಲೂರು ಜಾತ್ರೆಯು ಇಂದಿನಿಂದ ಪ್ರಾರಂಭವಾಗಿದ್ದು, ದೂರದೂರುಗಳಿಂದ ಸಾವಿರಾರು ಮಂದಿ ಭಕ್ತರು ಟೆಂಟ್ ಹೂಡಿದ್ದಾರೆ.
ಐದು ದಿನಗಳ ಕಾಲ ವಿಜೃಂಭಣೆಯಿಂದ ಜರುಗುವ ಈ ಜಾತ್ರೆಗೆ ಜಿಲ್ಲೆ ಸೇರಿದಂತೆ ರಾಜ್ಯದ ನಾನಾ ಕಡೆಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಈಗಾಗಲೇ ಜಿಲ್ಲಾಡಳಿತ ಹಾಗೂ ಗ್ರಾಮಪಂಚಾಯಿತಿಯಿಂದ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಿದ್ದು ಭಕ್ತರಿಗೆ ಕುಡಿಯುವ ನೀರು, ಆಸ್ಪತ್ರೆ, ಮುಂತಾದ ಸೌಲಭ್ಯಗಳಿವೆ ಇವೆ.
ಇಂದು ರಾತ್ರಿ ನಡೆಯುವ ಚಂದ್ರಮಂಡಲೋತ್ಸವದೊಂದಿಗೆ ಜಾತ್ರೆಗೆ ಚಾಲನೆ ಸಿಗಲಿದ್ದು ಶನಿವಾರ ಎರಡನೇ ದಿನ ದೊಡ್ಡವರ ಸೇವೆ, ಮೂರನೇ ದಿನ ಭಾನುವಾರ ಮುಡಿಸೇವೆ, ನಾಲ್ಕನೇ ದಿನ ಸೋಮವಾರ ಪಂಕ್ತಿಸೇವೆ ಹಾಗೂ ಮಂಗಳವಾರ ನಡೆಯುವ ಮುತ್ತತ್ತಿರಾಯನ ಸೇವೆಯೊಂದಿಗೆ ಐದು ದಿನಗಳ ಜಾತ್ರೆಗೆ ತೆರೆಬೀಳಲಿದೆ.
ಪ್ರಾಣಿಬಲಿ ನಡೆಯದಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದು ಜಾತ್ರೆಗೆ ಕುರಿ, ಕೋಳಿ, ಮೇಕೆ ಹಾಗೂ ಮಾರಕಾಸ್ತ್ರಗಳನ್ನು ತರುವುದನ್ನು ನಿಷೇಧಿಸಲಾಗಿದೆ. ಅಕ್ರಮ ಮದ್ಯ ಮಾರಾಟ ಇನ್ನಿತರ ಚಟುವಟಿಕೆಗಳನ್ನು ತಡೆಗಟ್ಟುವ ಉದ್ದೇಶದಿಂದ ಸುಮಾರು ಎಂಟು ಕಡೆ ಚೆಕ್ ಪೋಸ್ಟ್ ತೆರೆಯಲಾಗಿದೆ.
ಬಂದೋಬಸ್ತ್ ಗಾಗಿ 3 ಡಿವೈಎಸ್‍ಪಿ, 10 ಸಿಪಿಐ, 36 ಪಿಎಸ್‍ಐ, 950 ಪೊಲೀಸ್ ಸಿಬ್ಬಂದಿ ಹಾಗೂ 250 ಗೃಹರಕ್ಷಕದಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.