ಚಾಮರಾಜನಗರ: ಕೋಳಿ ಫಾರ್ಮ್ನ ಅವೈಜ್ಞಾನಿಕ ನಿರ್ವಹಣೆಯಿಂದಾಗಿ ನೊಣ ಹೆಚ್ಚಾಗಿ ಮತ್ತು ದುರ್ವಾಸನೆ ಬೀರುತ್ತಿದ್ದ ಹನೂರು ತಾಲೂಕಿನ ಹುಲ್ಲೇಪುರ ಗ್ರಾಮದಲ್ಲಿನ ಪೌಲ್ಟ್ರಿ ಫಾರ್ಮ್ಗೆ ತಹಶೀಲ್ದಾರ್ ನಾಗರಾಜು ಭೇಟಿ ನೀಡಿ, ಮಾಲೀಕನನ್ನು ತರಾಟೆಗೆ ತೆಗೆದುಕೊಂಡರು.
ತ್ಯಾಜ್ಯ ಸರಿಯಾಗಿ ವಿಲೇವಾರಿ ಮಾಡದಿರುವುದು ಮತ್ತು ಜೇನು ಹುಳುವಿನಂತೆ ಹಾರಾಡುತ್ತಿದ್ದ ನೊಣಗಳನ್ನು ಕಂಡ ತಹಶೀಲ್ದಾರ್ ಮಾಲೀಕ ರಾಜಪ್ಪನಿಗೆ ಕರೆಮಾಡಿ ಕ್ಲಾಸ್ ತೆಗೆದುಕೊಂಡರು. ಗುಂಡಿ ತೋಡಿ ತ್ಯಾಜ್ಯ ವಿಲೇವಾರಿ ಮಾಡಬೇಕು, ಸರಿಯಾಗಿ ಸ್ವಚ್ಛತೆ ಕಾಪಾಡಿ, ನೊಣಗಳಿಂದ ಗಾಯಗೊಳ್ಳುತ್ತಿರುವ ಹಸುಗಳಿಗೆ ಔಷಧೋಪಚಾರ ಮಾಡಿಸಬೇಕು. ಇದೇ ರೀತಿ ಅಶುಚಿತ್ವ ಮುಂದುವರಿಸಿದರೆ ಕೋಳಿ ಫಾರ್ಮ್ ಮುಚ್ಚಿಸುವುದು ಸೂಕ್ತವೆಂದು ಮೇಲಧಿಕಾರಿಗಳಿಗೆ ಹೇಳುತ್ತೇನೆಂದು ಎಚ್ಚರಿಸಿದರು.
ಬೆಂಗಳೂರು ಮೂಲದ ಉದ್ಯಮಿಯೊಬ್ಬರು ಸ್ಥಾಪಿಸಿರುವ 50 ಸಾವಿರ ಕೋಳಿ ಸಾಕಾಣಿಕೆ ಸಾಮರ್ಥ್ಯದ ಈ ಪೌಲ್ಟ್ರಿ ಫಾರ್ಮ್ನಲ್ಲಿ ಅವೈಜ್ಞಾನಿಕ ನಿರ್ವಹಣೆ ಮಾಡುತ್ತಿರುವುದರಿಂದ ಹನೂರು ಹೊರವಲಯ, ರಾಯರದೊಡ್ಡಿ, ಚಿಂಚಳ್ಳಿ ಹನೂರು, ಯದೊಡ್ಡಿ ಗ್ರಾಮಗಳಲ್ಲಿ ನೊಣಗಳ ಕಾಟ ಮಿತಿ ಮೀರಿದೆ. ಜನರು ಶುಚಿತ್ವದಲ್ಲಿ ಊಟ ಮಾಡಲಾಗದೇ, ಹೈನುಗಾರಿಕೆ ನಡೆಸಲಾಗದೇ ಶೋಚನೀಯ ಸ್ಥಿತಿ ಅನುಭವಿಸುತ್ತಿದ್ದಾರೆ. ನೊಣಗಳ ಕಾಟದಿಂದ ಹಸುಗಳನ್ನು ರಕ್ಷಿಸಿಕೊಳ್ಳಲು ಸೀರೆ ಕಟ್ಟುತ್ತಿರುವ ಬಗ್ಗೆ ಈಟಿವಿ ಭಾರತ ಶುಕ್ರವಾರ ವರದಿ ಬಿತ್ತರಿಸುವ ಮೂಲಕ ಗಮನ ಸೆಳೆದಿತ್ತು.
ಇದನ್ನೂ ಓದಿ: ಕೋಳಿ ಸಾಕಾಣಿಕೆ ಕೇಂದ್ರದಿಂದ ತೊಂದರೆ: ನೊಣಗಳಿಂದ ರಕ್ಷಿಸಲು ಹಸುಗಳಿಗೆ ಸೀರೆ ಸುತ್ತುವ ಹನೂರು ರೈತರು
ಇಂದು ಹನೂರು ತಹಶೀಲ್ದಾರ್ ಭೇಟಿ ನೀಡಿ ಮಾಲೀಕನಿಗೆ ಎಚ್ಚರಿಸಿದ್ದು, ಇನ್ನಾದರೂ ರೈತರಿಗೆ ನೊಣಗಳ ಕಾಟದಿಂದ ಮುಕ್ತಿ ಸಿಗುವುದೇ ಎಂಬುದನ್ನು ಕಾದು ನೋಡಬೇಕು.