ಗುಂಡ್ಲುಪೇಟೆ (ಚಾಮರಾಜನಗರ): ತಾಲೂಕಿನಾದ್ಯಂತ ಕಳೆದ ನಾಲ್ಕು ದಿನಗಳಿಂದ ಸತತವಾಗಿ ಮಳೆಯಾಗುತ್ತಿದ್ದು, ಸಣ್ಣ ಪುಟ್ಟ ಕೆರೆ-ಕಟ್ಟೆಗಳು ತುಂಬಿವೆ. ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಪಟ್ಟಣ ವ್ಯಾಪ್ತಿಯ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದೆ. ಮುಖ್ಯರಸ್ತೆ ಊಟಿ ಸರ್ಕಲ್ನ ಚೆಕ್ ಪೋಸ್ಟ್ ಹತ್ತಿರ ಚರಂಡಿ ವ್ಯವಸ್ಥೆ ಸರಿಯಾಗಿ ಇಲ್ಲದ ಕಾರಣ ಮಳೆ ನೀರು ನಿಂತು ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿತ್ತು.
ಬಂಡೀಪುರ ರಾಷ್ಟ್ರೀಯ ಅಭಯಾರಣ್ಯದಲ್ಲಿಯೂ ಉತ್ತಮ ಮಳೆಯಾಗಿದ್ದು, ಕಾಡಿನೊಳಗಿರುವ ಸಣ್ಣ-ಪುಟ್ಟ ಕೆರೆಗಳು ತುಂಬಿವೆ. ಇದರಿಂದ ಕಾಡು ಪ್ರಾಣಿಗಳಿಗೆ ನೀರಿನ ದಾಹ ತೀರಿದಂತಾಗಿದೆ ಎಂದು ಎಸಿಎಫ್ ಪರಮೇಶ್ ತಿಳಿಸಿದ್ದಾರೆ.
ಹಂಗಳ, ತೆರಕಣಾಂಬಿ, ಬೇಗೂರು ಹೋಬಳಿ ವ್ಯಾಪ್ತಿಯಲ್ಲಿಯೂ ಕಳೆದ ನಾಲ್ಕು ದಿನಗಳಿಂದ ಉತ್ತಮ ಮಳೆಯಾಗಿದ್ದು, ರೈತರು ಹುರುಳಿ ಸೇರಿದಂತೆ ಇತರೆ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ಜೊತೆಗೆ ಸತತ ಮಳೆಯಿಂದ ತಾಲೂಕಿನ ಜನತೆ ಹೈರಾಣಾಗಿದ್ದಾರೆ ಎಂದು ರೈತ ಮುಖಂಡ ಶಿವಪುರ ಮಹದೇವಪ್ಪ ತಿಳಿಸಿದರು.
ಗುಂಡಿಮಯವಾದ ಹಳೇ ಬಸ್ ನಿಲ್ದಾಣ ರಸ್ತೆ:
ಪಟ್ಟಣದ ಹಳೇ ಬಸ್ ನಿಲ್ದಾಣದ ರಸ್ತೆ ಸಂಪೂರ್ಣ ಗುಂಡಿಮಯವಾಗಿದ್ದು, ಮಳೆ ಬಂದ ವೇಳೆ ನೀರು ತುಂಬಿ ಸಂಚಾರ ದುಸ್ತರವಾಗುತ್ತಿದೆ. ಹೀಗಿದ್ದರೂ ಪುರಸಭೆ ಆಡಳಿತ ರಸ್ತೆ ಗುಂಡಿ ಮುಚ್ಚುವ ಕಾರ್ಯಕ್ಕೆ ಮುಂದಾಗಿಲ್ಲ ಎಂದು ಕರವೇ ತಾಲೂಕು ಅಧ್ಯಕ್ಷ ಸುರೇಶ್ ನಾಯಕ ಅಸಮಾಧಾನ ವ್ಯಕ್ತಪಡಿಸಿದರು.