ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಕಾಡಂಚಿನ ಗ್ರಾಮಗಳಿಂದ ಕೂಡಿರುವ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿಯ ಇಂಡಿಗನತ್ತ ಗ್ರಾಮದಲ್ಲಿ ಅಕ್ಕ-ತಂಗಿಯರ ನಡುವೆ ಹಣಾಹಣಿ ಏರ್ಪಟ್ಟಿದೆ.
'ಕೊಂಬುಡಿಕ್ಕಿ'ಯಲ್ಲಿ ಸಹೋದರರ ಸವಾಲ್!
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ರಾಜಮ್ಮ ಸ್ಪರ್ಧಿಸಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ನಾಗರತ್ನಮ್ಮ ಕಣದಲ್ಲಿದ್ದಾರೆ. ಇಬ್ಬರೂ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸದೊಂದಿಗೆ ಚುನಾವಣೆ ಅಖಾಡಕ್ಕೆ ಧುಮುಕಿದ್ದಾರೆ. ಯಾರೇ ಚುನಾಯಿತರಾದರೂ ಮೊಟ್ಟ ಮೊದಲ ಬಾರಿಗೆ ಗ್ರಾಮ ಪಂಚಾಯಿತಿಗೆ ಪ್ರವೇಶ ಪಡೆದಂತಾಗುತ್ತದೆ. ಕೊಂಬುಡಿಕ್ಕಿ ಗ್ರಾಮದಲ್ಲಿ ಅಣ್ಣ-ತಮ್ಮಂದಿರ ನಡುವೆಯೇ ಗ್ರಾ.ಪಂ. ಸದಸ್ಯತ್ವಕ್ಕಾಗಿ ಕಾದಾಟ ಪ್ರಾರಂಭವಾಗಿದೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಮಾದೇವ ಅಖಾಡದಲ್ಲಿದ್ದರೆ, ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಬೆಳ್ಳಿ ಕಣದಲ್ಲಿದ್ದಾರೆ.
ಇದನ್ನು ಓದಿ:ರಾಜ್ಯದ ಅತ್ಯಂತ ಪುಟ್ಟ ಗ್ರಾಪಂ ಚುನಾವಣೆ ವೇಳೆ ನಡೀತಿದ್ದ ಗಲಾಟೆಗೆ ಬ್ರೇಕ್ : ಐವರು ಅವಿರೋಧ ಆಯ್ಕೆ
ಭದ್ರಯ್ಯನಹಳ್ಳಿಯಲ್ಲಿ ವಾರಗಿತ್ತಿಯರ ಫೈಟ್!
ಶೆಟ್ಟಳ್ಳಿ ಗ್ರಾ.ಪಂ.ನ ಭದ್ರಯ್ಯನಹಳ್ಳಿ ಗ್ರಾಮದಲ್ಲಿ ವಾರಗಿತ್ತಿಯರೇ ಚುನಾವಣೆ ರಣರಂಗದಲ್ಲಿದ್ದಾರೆ. ಇಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ರೂಪಾ ಮುಕುಂದ ಇದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಶಿವಮಲ್ಲಮ್ಮ ಮಾದೇವು ಅದೃಷ್ಟ ಪರೀಕ್ಷಿಸುತ್ತಿದ್ದಾರೆ. ಈ ಇಬ್ಬರೂ ಹಿಂದೆ ಕಾಂಗ್ರೆಸ್ ಬೆಂಬಲಿತರಾಗುವ ಆಕಾಂಕ್ಷಿಗಳಾಗಿದ್ದರು. ಆದರೆ ರೂಪಾ ಅವರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಕಣಕ್ಕಿಳಿದ ಹಿನ್ನೆಲೆ ಶಿವಮಲ್ಲಮ್ಮ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರ ಬೆಂಬಲದೊಂದಿಗೆ ಅಖಾಡ ಪ್ರವೇಶಿಸಿದ್ದಾರೆ ಎನ್ನಲಾಗಿದೆ.
ಮಾಜಿ ಸದಸ್ಯರ ಮಧ್ಯೆ ಯುವಕನಿಗೆ ಅಗ್ನಿ ಪರೀಕ್ಷೆ!
ಬಂಡಳ್ಳಿ ಗ್ರಾಮ ಪಂಚಾಯಿತಿಯ 1 ವಾರ್ಡಿಗೆ ಇಬ್ಬರು ಮಾಜಿ ಸದಸ್ಯರ ನಡುವೆ 22 ವರ್ಷದ ಯುವಕ ಅದೃಷ್ಟ ಪರೀಕ್ಷೆಗಿಳಿದಿದ್ದಾನೆ. 1ನೇ ವಾರ್ಡಿಗೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ 60 ವರ್ಷದ ಶಿವನಪ್ಪ, ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ 40 ವರ್ಷದ ಮಾಜಿ ಸದಸ್ಯ ನಾಗರಾಜು ಸ್ಪರ್ಧಿಸಿದ್ದಾರೆ. ಈ ಸ್ಥಾನಕ್ಕೆ ಕಾಂಗ್ರೆಸ್ ಬೆಂಲಿತ ಅಭ್ಯರ್ಥಿಯಾಗಿ 22ರ ಹರೆಯದ ಬಸವಣ್ಣ ಅಖಾಡಕ್ಕಿಳಿದು ಎಲ್ಲರ ಗಮನ ಸೆಳೆದಿದ್ದಾರೆ.
ಪದವೀಧರರು, ವಕೀಲರು ಕಣಕ್ಕೆ: ಗುಂಡ್ಲುಪೇಟೆ ತಾಲೂಕಿನ ಗ್ರಾಪಂ ಚುನಾವಣೆಗೆ ಹಲವು ಪದವೀದರರು, ವಕೀಲರು ಕಣಕ್ಕಿಳಿದು ತೀವ್ರ ಪೈಪೋಟಿ ಒಡ್ಡುತ್ತಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಒಂದರಲ್ಲೇ 20 ಕ್ಕೂ ಹೆಚ್ಚು ಪದವೀಧರರು ಹಳ್ಳಿ ಅಖಾಡಕ್ಕೆ ಧುಮುಕಿದ್ದಾರೆ.