ಚಾಮರಾಜನಗರ: ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸಬಾರದು ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರು ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡಲೇಬೇಕೆಂದರೆ ಮೊದಲು ಸರ್ಕಾರಿ ಹುದ್ದೆಗಳಿಗೆ ರಾಜೀನಾಮೆ ಕೊಡಲಿ. ಆದೇಶ ಮೀರಿ ಖಾಸಗಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ತಿಳಿದು ಬಂದಲ್ಲಿ, ಅವರ ಎಲ್ಲಾ ಭಡ್ತಿಗಳನ್ನು ತಡೆ ಹಿಡಿಯಲಾಗುವುದು. ಈ ಬಗ್ಗೆ ಸಿಎಂ ಜೊತೆ ಚರ್ಚಿಸಿ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ.
ಎರಡು ದಿನಗಳ ಜಿಲ್ಲಾ ಪ್ರವಾಸ ಕೈಗೊಂಡಿದ್ದ ಆರೋಗ್ಯ ಸಚಿವ ಬಿ.ಶ್ರೀರಾಮುಲು ಇಂದು ಜಿಲ್ಲಾಸ್ಪತ್ರೆ ಆವರಣದಲ್ಲಿ ಸಾರ್ವಜನಿಕರ ಕುಂದುಕೊರತೆ ಆಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಗುತ್ತಿಗೆ ಆಧಾರ ಎಂಬುದೇ ದೊಡ್ಡ ಲಾಬಿಯಾಗಿದ್ದು, ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ತೆಗೆದುಕೊಳ್ಳುವುದನ್ನು ನಿಲ್ಲಿಸಿ ಖಾಯಂ ಉದ್ಯೋಗಗಳನ್ನು ನೀಡಲಾಗುತ್ತದೆ. ಶುಶ್ರೂಕಿಯರಿಗೆ ಸೇವಾ ಭದ್ರತೆ ಮತ್ತು ವೇತನ ಹೆಚ್ಚಳ ಕುರಿತು ಮುಖ್ಯಮಂತ್ರಿ ಜೊತೆ ಚರ್ಚಿಸಿ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ರು.
ಆರೋಗ್ಯ ಕಾರ್ಡ್, ವಿಕಲಚೇತನರ ಕಾರ್ಡ್ಗಳು ಬಾಕಿ ಉಳಿಸಿಕೊಂಡಿರುವುದನ್ನು ಎರಡು ದಿನ ಕ್ಯಾಂಪ್ ನಡೆಸಿ ವಿಲೇವಾರಿ ಮಾಡಬೇಕು. 7 ವೆಂಟಿಲೇಟರ್ ಹಾಗೂ ಗಾಲಿ ಕುರ್ಚಿಗಳಿಗೆ ಇಂದೇ ಪ್ರಸ್ತಾವನೆ ಸಲ್ಲಿಸಿ ಎಂದು ಆರೋಗ್ಯಧಿಕಾರಿಗಳಿಗೆ ಸಚಿವರು ಸೂಚಿಸಿದರು. ಬಳಿಕ ಜೆನರಿಕ್ ಔಷಧಿ ಮಳಿಗೆ ಸರಿಯಾಗಿ ಕಾರ್ಯ ನಿರ್ವಹಿಸದ ಆರೋಪ ಕೇಳಿಬಂದ ಹಿನ್ನೆಲೆ, ಗರಂ ಆದ ಶ್ರೀರಾಮುಲು ಅವರು ಕೂಡಲೇ ಮಳಿಗೆಯನ್ನು ಸೀಜ್ ಮಾಡಿ, ಸ್ಥಳೀಯರಿಗೆ ಅವಕಾಶ ಕೊಡಿ ಎಂದು ಡೀನ್ಗೆ ತಾಕೀತು ಮಾಡಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಬಂಧಿಗಳು ಮಲಗಲು, ಊಟ ಮಾಡಲು ತೊಂದರೆ ಅನುಭವಿಸುತ್ತಿದ್ದಾರೆ. ಸಂಘ ಸಂಸ್ಥೆಗಳು, ದಾನಿಗಳು ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿಗೆ ಮುಂದಾಗಬೇಕು ಎಂದು ಇದೇ ವೇಳೆ ಅವರು ಮನವಿ ಮಾಡಿದರು. ಸರ್ಕಾರಿ ಆಸ್ಪತ್ರೆಗಳು ಕಾರ್ಪೋರೇಟ್ ಸಂಸ್ಥೆಗಳಂತೆ ತಂತ್ರಜ್ಞಾನದಲ್ಲಿ ಬದಲಗಾಬೇಕು. ಚೀಟಿ ಬರೆಯುವುದು ನಿಲ್ಲಿಸಿ, ಎಲ್ಲವೂ ಕಂಪ್ಯೂಟರೀಕರಣ ಆಗಬೇಕು. ಸರ್ಕಾರಿ ಆರೋಗ್ಯಾಧಿಕಾರಿಗಳು ಫೇಸ್ಬುಕ್, ಟ್ವಿಟ್ಟರ್ನಲ್ಲೂ ಕೂಡ ಮಾಹಿತಿ ಹಂಚಿಕೊಂಡು ಜನಸಾಮಾನ್ಯರಿಗೆ ಹತ್ತಿರವಾಗಬೇಕು ಎಂದು ಸಚಿವ ಶ್ರೀರಾಮುಲು ಸಲಹೆ ನೀಡಿದ್ರು.