ಚಾಮರಾಜನಗರ: ಶ್ರೀ ವಿದ್ಯಾಗಣಪತಿ ಮಂಡಳಿಯ ದೊಡ್ಡ ಗಣಪತಿಯ ನಿಮಜ್ಜನ ಸೋಮವಾರ ನಡೆಯಲಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಗಣಪತಿ ಮೆರವಣಿಗೆ ತೆರಳುವ ಕಡೆ ಪೊಲೀಸರು ಪಥಸಂಚಲನ ನಡೆಸಿದರು.
ದೊಡ್ಡಂಗಡಿ ಬೀದಿ, ರಥಬೀದಿ, ಗುಂಡ್ಲುಪೇಟೆ ಸರ್ಕಲ್, ಅಂಬೇಡ್ಕರ್ ಕಾಲೋನಿಗಳಲ್ಲಿ ಎಎಸ್ಪಿ ನೇತೃತ್ವದಲ್ಲಿ ಡಿವೈಎಸ್ಪಿ, ಸಿಪಿಐ, ಪಿಎಸ್ಐ ಸೇರಿದಂತೆ ಪೇದೆಗಳು, ಮೀಸಲು ಪಡೆ, ಗೃಹರಕ್ಷಕ ದಳ ಪಥಸಂಚಲನ ನಡಸಿ ಶಾಂತಿ ಸುವ್ಯವಸ್ಥೆಗಾಗಿ ಜಾಗೃತಿ ಮೂಡಿಸಿದರು.
ದೊಡ್ಡ ಗಣಪತಿ ನಿಮಜ್ಜನ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದು, 3 ಮಂದಿ ಡಿವೈಎಸ್ಪಿ, 7 ಮಂದಿ ಸಿಪಿಐ, 19 ಮಂದಿ ಪಿಎಸ್ಐ, 50 ಮಂದಿ ಎಎಸ್ಐ, 400 ಮಂದಿ ಪೊಲೀಸ್ ಪೇದೆಗಳು, 5 ಕೆಎಸ್ಆರ್ಪಿ ತುಕಡಿ, 7 ಡಿಆರ್ ಹಾಗೂ 300 ಮಂದಿ ಗೃಹ ರಕ್ಷಕದಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಎಎಸ್ಪಿ ಅನಿತಾ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ಸೋಮವಾರ ಬೆಳಗ್ಗೆ 10.30ಕ್ಕೆ ಗಣಪತಿ ನಿಮಜ್ಜನ ಮೆರವಣಿಗೆ ಕಲಾ ತಂಡಗಳ ಮೂಲಕ ಸಾಗಲಿದ್ದು, ಅಂದಾಜು 7-8 ತಾಸು ಮೆರವಣಿಗೆಯಾದ ಬಳಿಕ ದೊಡ್ಡರಸಿನ ಕೊಳದಲ್ಲಿ ಗಣಪನ ನಿಮಜ್ಜನ ಕಾರ್ಯ ನಡೆಯಲಿದೆ.
ಎಲ್ಲಿ ನೋಡಿದರೂ ಪೊಲೀಸರೇ ಕಾಣುವುದರಿಂದ ದೊಡ್ಡ ಗಣಪತಿಗೆ ಪೊಲೀಸ್ ಗಣಪ ಎಂದು ಕರೆಯಲಿದ್ದು, ನಿಮಜ್ಜನ ಮೆರವಣಿಗೆಗೂ ಮುನ್ನ ಪೊಲೀಸ್ ವರಿಷ್ಠಾಧಿಕಾರಿ ಪೂಜೆ ಸಲ್ಲಿಸುವುದು ಸಂಪ್ರದಾಯವಾಗಿದೆ. ಹಿಂದೂಪರ ಸಂಘಟನೆಗಳು ಗಣಪತಿಯನ್ನು ಪ್ರತಿಷ್ಠಾಪಿಸುವುದರಿಂದ ಇದು ಆರ್ಎಸ್ಎಸ್ ಗಣಪತಿ ಎಂತಲೂ ಪ್ರಸಿದ್ಧಿ.