ಚಾಮರಾಜನಗರ : ಖಾಸಗಿ ಫೈನಾನ್ಸ್ ಕಂಪನಿಯೊಂದು ಜನರ ಬಳಿ ಹಣ ಕಟ್ಟಿಸಿಕೊಂಡು ಪಂಗನಾಮ ಹಾಕಿರುವ ಆರೋಪ ಕೇಳಿ ಬಂದಿದೆ.
ಗುಂಡ್ಲುಪೇಟೆಯ ಸುರಭಿ ಹೋಟೆಲ್ ಬಳಿ ಇರುವ ಎಸ್ವಿಎಸ್ ಎಂಬ ಖಾಸಗಿ ಫೈನಾನ್ಸ್ ಕಂಪನಿ ಮೇಲೆ ವಂಚನೆ ಆರೋಪ ಕೇಳಿ ಬಂದಿದೆ. ಜನರಿಂದ ಹಣ ಕಟ್ಟಿಸಿಕೊಂಡು ಸಾಲ ಕೊಡಲು ಇಂದು- ನಾಳೆ ಎಂದು ಅಲೆದಾಡಿಸುತ್ತಿದೆ ಎನ್ನಲಾಗಿದೆ. ಸೋಮವಾರ ಬೆಳಿಗ್ಗೆ ನೂರಾರು ಮಂದಿ ಸಾಲ ಪಡೆಯಲು ಜಮಾಯಿಸಿದ ವೇಳೆ ಮೋಸ ಹೋಗಿರುವ ಘಟನೆ ಬೆಳಕಿಗೆ ಬಂದಿದೆ.
ಎಸ್ವಿಎಸ್ ಕಂಪನಿಗೆ ಹಲವಾರು ಜನ 2 ಸಾವಿರದಿಂದ 50 ಸಾವಿರವರೆಗೆ ಹಣ ಕಟ್ಟಿದ್ದಾರೆ. ಇಂತಿಷ್ಟು ಸಾವಿರ ಹಣವನ್ನು ಕಟ್ಟಿದರೆ ಲಕ್ಷದವರೆಗೆ ಸಾಲ ನೀಡುವುದಾಗಿ ಎಸ್ವಿಎಸ್ ಕಂಪನಿ ಹೇಳಿತ್ತು ಎನ್ನಲಾಗಿದೆ. ಈಗ ಸಾಲ ನೀಡದೆ ಅಲೆದಾಡಿಸುತ್ತಿದೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಮಾಹಿತಿ ಅರಿತ ಪೊಲೀಸರು ಎಸ್ವಿಎಸ್ ಪೈನಾನ್ಸ್ ಸಿಬ್ಬಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕಂಪನಿಯ ಎಂಡಿ ಶಿವರಾಜ್ ಎಂಬಾತ ಮೈಸೂರು ಮೂಲದವನು ಎಂಬುವುದು ಗೊತ್ತಾಗಿದೆ. ಪೊಲೀಸರು ಆತನನ್ನು ಠಾಣೆಗೆ ಕರೆದು ವಿಚಾರಣೆ ನಡೆಸಿದ್ದಾರೆ.